ನವದೆಹಲಿ, ಫೆ.10 (DaijiworldNews/MB) : ಒಟ್ಟು 93,032 ಶ್ರೀಲಂಕಾದ ತಮಿಳು ನಿರಾಶ್ರಿತರು ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಅವರು 1955 ರ ಪೌರತ್ವ ಕಾಯ್ದೆಯಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ ನೋಂದಣಿ ಮೂಲಕ ಭಾರತೀಯ ಪೌರತ್ವವನ್ನು ಪಡೆಯಬಹುದು ಎಂದು ಗೃಹ ಸಚಿವಾಲಯ ಸಂಸತ್ತಿನಲ್ಲಿ ಮಂಗಳವಾರ ತಿಳಿಸಿದೆ.
ತಮಿಳುನಾಡು ಸರ್ಕಾರದ ಅನಿವಾಸಿ ತಮಿಳರ ಪುನರ್ವಸತಿ ಮತ್ತು ಕಲ್ಯಾಣ ಆಯುಕ್ತರು ನೀಡಿದ ಅಂಕಿಅಂಶಗಳನ್ನು ಗೃಹ ಸಚಿವಾಲಯ ಉಲ್ಲೇಖಿಸಿದೆ.
58,843 ಶ್ರೀಲಂಕಾದ ತಮಿಳು ನಿರಾಶ್ರಿತರು ತಮಿಳುನಾಡಿನ 108 ಶಿಬಿರಗಳಲ್ಲಿ ವಾಸಿಸುತ್ತಿದ್ದರೆ, 34,135 ಮಂದಿ ಶಿಬಿರೇತರ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಆದರೆ ಅವರು ಸ್ಥಳೀಯ ಪೊಲೀಸರಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಲಿಖಿತ ಉತ್ತರದಲ್ಲಿ ಗೃಹ ಸಚಿವ ನಿತ್ಯಾನಂದ್ ರೈ ಅವರು ಲೋಕಸಭೆಗೆ ಮಾಹಿತಿ ನೀಡಿದರು.
ಇದಲ್ಲದೆ, ಲಭ್ಯವಿರುವ ಮಾಹಿತಿಯ ಪ್ರಕಾರ, 54 ಶ್ರೀಲಂಕಾದ ತಮಿಳು ನಿರಾಶ್ರಿತರು ಒಡಿಶಾದ ಮಲ್ಕಂಗಿರಿನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದಾರೆ.
ಶ್ರೀಲಂಕಾದ ಪ್ರಜೆಯೂ ಸೇರಿದಂತೆ ಯಾವುದೇ ವಿದೇಶಿಯರು 1955 ರ ಪೌರತ್ವ ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಪೂರೈಸಿದ ನಂತರ ನೋಂದಣಿ ಮೂಲಕ ಭಾರತೀಯ ಪೌರತ್ವವನ್ನು ಪಡೆಯಬಹುದಾಗಿದೆ.