ಉತ್ತರಾಖಂಡ, ಫೆ.10 (DaijiworldNews/MB) : ಉತ್ತರಾಖಂಡದ ಹಿಮ ಪ್ರವಾಹ ದುರಂತದಲ್ಲಿ ಇನ್ನೂ ಐವರು ಮೃತಪಟ್ಟಿದ್ದು ಒಟ್ಟು ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. 175 ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯ ನಡೆಯುತ್ತಲಿದೆ.
ತಪೋವನ- ವಿಷ್ಣುಗಡ ಯೋಜನೆ ಯ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಜನರ ರಕ್ಷಣಾ ಯತ್ನ ನಡೆದಿದೆ. ಎನ್ಟಿಪಿಸಿಯ ವಿದ್ಯುತ್ ಘಟಕದ ಸುರಂಗದಲ್ಲಿ ಸಿಲುಕಿರುವ 37 ಕಾರ್ಮಿಕರ ರಕ್ಷಣೆ ಪ್ರಯತ್ನವೂ ನಡೆಯುತ್ತಿದೆ.
ತಪೋವನ- ವಿಷ್ಣುಗಡ ಯೋಜನೆ ಯ ಸುರಂಗದಲ್ಲಿ ಕಾರ್ಮಿಕರು 12 ಅಡಿ ಎತ್ತರ ಮತ್ತು ಸುಮಾರು 2.5 ಕಿ.ಮೀ ಉದ್ದದ ಹೆಡ್ ರೇಸ್ ಟನಲ್ನಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದ್ದ, ಎನ್ಟಿಪಿಸಿಯ ವಿದ್ಯುತ್ ಘಟಕದ ಕಮಾನಿನ ಆಕೃತಿಯ 1.8 ಕಿ.ಮೀ. ಉದ್ದದ ಸುರಂಗದಲ್ಲಿ ಕಾರ್ಮಿಕರು ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಭಾನುವಾರದಿಂದ ನಿರಂತರವಾಗಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು ಜೆಸಿಬಿ ಹಾಗೂ ಇತರ ಯಂತ್ರಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಲೇ ಇದೆ. ಇನ್ನು ಸುರಂಗದೊಳಗೆ ಗಾಳಿ ತೀರಾ ಕಡಿಮೆ ಇರುವ ಹಿನ್ನೆಲೆ ಸಿಲುಕಿದವರು ಬದುಕಿರುವುದು ಕಷ್ಟ ಎಂದು ಕೂಡಾ ಹೇಳಲಾಗಿದೆ.
ಆದರೆ ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಐಟಿಬಿಪಿಯ ಅಸಿಸ್ಟೆಂಟ್ ಕಮಾಂಡರ್ ಶೇರ್ಸಿಂಗ್ ಬುಟೋಲ, ''ಭಾನುವಾರವೇ ನಾವು 17 ಮಂದಿಯನ್ನು ರಕ್ಷಿಸಿದ್ದೇವೆ. ಆದ್ದರಿಂದ ನಮಗೆ ಇನ್ನೂ ಆಶಾಭಾವದಿಂದಿದ್ದೇವೆ. ಜನರ ರಕ್ಷಣೆಗಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ'' ಎಂದು ಹೇಳಿದ್ದಾರೆ.
''ಸುರಂಗದೊಳಗೆ ಜೆಸಿಬಿಯಂಥ ಯಂತ್ರಗಳನ್ನು ಬಳಸಲಾಗುವುದಿಲ್ಲ. ಮುಂದೆ ಹೋದಂತೆ ಸುರಂಗದ ಅಗಲ ಕಡಿಮೆಯಾಗುತ್ತದೆ. ಹಾಗೆಯೇ ಯಂತ್ರ ಬಳಕೆಯಿಂದ ಸುರಂಗ ಕುಸಿಯುವ ಅಪಾಯವೂ ಇದೆ. ಪ್ರಸ್ತುತ ಸಣ್ಣ ಯಂತ್ರಗಳನ್ನು ಸುರಂಗದೊಳಗೆ ಕಳುಹಿಸುತ್ತಿದ್ದೇವೆ'' ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಮೇಜರ್ ಜನರಲ್ ರಾಜೀವ್ ಛಿಬ್ಬರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ''ಸುರಂಗದೊಳಗೆ ಕೆಸರು ತುಂಬಿದ್ದು ಅದನ್ನು ತೆರವುಗೊಳಿಸುವ ಕಾರ್ಯವು ನಡೆಯುತ್ತಿದೆ. ಸುರಂಗದ ಮೇಲ್ಭಾಗದಿಂದ ಒಳನುಗ್ಗಿ ಒಳ ಸಿಲುಕಿರುವವರ ರಕ್ಷಣೆ ನಡೆಸುವ ಯತ್ನವೂ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.