ಬೆಂಗಳೂರು, ಫೆ. 09 (DaijiworldNews/SM): ಮಹಾಮಾರಿ ಕೊರೋನಾ ವೈರಸ್ ನಿಂದಾಗಿ ಉಂಟಾದ ಲಾಕ್ ಡೌನ್ ನಿಂದಾಗಿ ಶಾಲಾ ವಾರ್ಷಿಕ ಅವಧಿಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಈ ಕಾರಣದಿಂದ ಪಠ್ಯ ಸರಿದೂಗಿಸಲು ಈ ಬಾರಿ ಬೇಸಿಗೆ ರಜೆ ಕಡಿತ ಮಾಡಲಾಗಿದೆ. ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮುಂಬರುವ ಬೇಸಿಗೆ ರಜಾ ದಿನಗಳನ್ನು ಕಡಿತಗೊಳಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದುಹೋದ ಸಮಯವನ್ನು ಸರಿದೂಗಿಸಲು ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿಳಂಬವಾಗುವುದನ್ನು ತಡೆಯಲು, ಶಿಕ್ಷಣ ಇಲಾಖೆಯು ರಜಾದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಯೋಜನೆಯನ್ನು ರೂಪಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.