ನವದೆಹಲಿ, ಫೆ. 09 (DaijiworldNews/HR): "ಕೊರೊನಾ ಲಸಿಕೆ ಪಡೆದವರಿಗೆ ಲಸಿಕೆಯಿಂದ ಯಾವುದಾದರೂ ಅಡ್ಡ ಪರಿಣಾಮವಾದಲ್ಲಿ ಅಥವಾ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡಲ್ಲಿ ಅದಕ್ಕೆ ವಿಮಾ ಪರಿಹಾರ ನೀಡಲಾಗುವುದಿಲ್ಲ" ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.
ಈ ಕುರಿತು ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, "ಕೊರೊನಾ ಲಸಿಕೆಯನ್ನು ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಪಡೆದುಕೊಳ್ಳುತ್ತಿದ್ದು, ಇದಕ್ಕೆ ಯಾವುದೇ ವಿಮಾ ಪರಿಹಾರ ನೀಡಲಾಗುವುದಿಲ್ಲ" ಎಂದಿದ್ದಾರೆ.
"ಕೊರೊನಾ ಲಸಿಕೆ ಪಡೆದವರನ್ನು ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಅವಧಿಯವರೆಗೆ ನಿಗಾದಲ್ಲಿರಿಸಲಾಗುತ್ತಿದ್ದು, ಅಷ್ಟರಲ್ಲಿ ಅವರಿಗೇನಾದರೂ ಲಸಿಕೆಯಿಂದ ಅಡ್ಡ ಪರಿಣಾಮ ಕಾಣಿಸಿದರೆ ತಕ್ಷಣವೇ ಅವರಿಗೆ ಉಚಿತ ಚಿಕಿತ್ಸೆ ಕೊಡುವ ವ್ಯವಸ್ಥೆಯೂ ಇದೆ" ಎಂದರು.
ಇನ್ನು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಹೆಚ್ಚಿನ ಅಡ್ಡ ಪರಿಣಾಮ ಉಂಟಾಗಿಲ್ಲ, ಫೆಬ್ರುವರಿ 4ರವರೆಗೆ ಲಸಿಕೆ ಹಾಕಿಸಿಕೊಂಡವರಲ್ಲಿ ಕೇವಲ 81 ಜನರಿಗೆ ಮಾತ್ರ ಅಡ್ಡ ಪರಿಣಾಮದ ಲಕ್ಷಣಗಳು ಕಾಣಿಸಿಕೊಂಡಿದ್ದು, ಇದರ ಪ್ರಮಾಣ ಕೂಡ ಶೇ 0.096 ಮಾತ್ರವಿದೆ" ಎಂದು ತಿಳಿಸಿದ್ದಾರೆ.