ನವದೆಹಲಿ, ಫೆ. 09 (DaijiworldNews/HR): ಜನವರಿ 26 ಗಣರಾಜ್ಯೋತ್ಸವದಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ಘಟನೆ ಕುರಿತು ಟ್ವೀಟ್ ಮಾಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಹಿರಿಯ ಪತ್ರಕರ್ತರ ಬಂಧನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆಯ ಕುರಿತು ದೃಢಪಡದ ಸುದ್ದಿಯನ್ನು ಹಂಚಿಕೊಂಡದ್ದಕ್ಕೆ ಸಂಬಂಧಿಸಿ ಶಶಿ ತರೂರ್ ಮತ್ತು ಕೆಲ ಹಿರಿಯ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಶಶಿ ತರೂರ್, ಹಿರಿಯ ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ, ನ್ಯಾಷನಲ್ ಹೆರಾಲ್ಡ್ನ ಮ್ರಿಣಾಲ್ ಪಾಂಡೆ ಪಾಂಡೆ, ಕೌಮಿ ಆವಾಜ್ನ ಜಾಫರ್ ಆಘಾ, ದಿ ಕ್ಯಾರವನ್ ಸುದ್ದಿ ಸಮೂಹದ ಅನಂತ್ ನಾಥ್ ಮತ್ತು ವಿನೋದ್ ಜೋಶ್ ಅವರ ವಿರುದ್ಧ ಸೆಕ್ಷನ್ 124 ಎ (ದೇಶದ್ರೋಹ), 153-ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯ), ಸೆಕ್ಷನ್ 504 (ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 120ಬಿ (ಮರಣದಂಡನೆ ಶಿಕ್ಷೆ ವಿಧಿಸುವ ಅಪರಾಧಕ್ಕೆ ಅಪರಾಧ ಸಂಚು) ಸೇರಿದಂತೆ ಒಟ್ಟು 11 ಐಪಿಸಿ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು ಎನ್ನಲಾಗಿದೆ.