ನವದೆಹಲಿ, ಫೆ.09 (DaijiworldNews/MB) : ಚೀನಾದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಉದ್ವಿಗ್ನ ಪರಿಸ್ಥಿತಿಯ ಮಧ್ಯೆ, ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ, ಚೀನಾದ 80 ಕಂಪನಿಗಳು ದೇಶದಲ್ಲಿ ಸಕ್ರಿಯವಾಗಿ ವ್ಯಾಪಾರ ಮಾಡುತ್ತಿವೆ ಮತ್ತು 92 ಕಂಪನಿಗಳು ನೋಂದಣಿಯಾಗಿವೆ ಎಂದು ತಿಳಿದು ಬಂದಿದೆ.
ಚೀನಾದ ಕಂಪನಿಗಳನ್ನು ನಿರ್ಬಂಧಿಸುವ ಬಗ್ಗೆ ಪ್ರಶ್ನಿಸಿದಾಗ, ನಿಯಮಗಳು ಈಗಾಗಲೇ ಜಾರಿಯಲ್ಲಿವೆ ಮತ್ತು ಎಲ್ಲಾ ಕಂಪನಿಗಳು ಇದನ್ನು ಪಾಲಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ಟಿಕ್ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್ಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ.
ಎಫ್ಡಿಐ ಅನ್ನು ಆರ್ಬಿಐ ನಿಯಂತ್ರಿಸುತ್ತದೆ ಮತ್ತು ರಕ್ಷಣಾ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸೇರಿದಂತೆ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ, ಸರ್ಕಾರದ ಅನುಮತಿಯೊಂದಿಗೆ ಇದಕ್ಕೆ ಸಮ್ಮತಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದಕ್ಕೂ ಮೊದಲು ಡಿಸೆಂಬರ್ 24 ರಂದು ನಡೆದ ಭದ್ರತಾ ಕುರಿತ ಸಂಪುಟ ಸಭೆಯಲ್ಲಿ ದೂರಸಂಪರ್ಕ ಕ್ಷೇತ್ರದ ರಾಷ್ಟ್ರೀಯ ಭದ್ರತಾ ನಿರ್ದೇಶನವನ್ನು ಸರ್ಕಾರ ಅಂಗೀಕರಿಸಿತು. ಸುರಕ್ಷಿತ ರಾಷ್ಟ್ರೀಯ ನೆಟ್ವರ್ಕ್ ರಚಿಸುವ ಕ್ರಮವು ಭವಿಷ್ಯದ 5 ಜಿ ನೆಟ್ವರ್ಕ್ಗಳಲ್ಲಿ ಟೆಲಿಕಾಂ ಆಪರೇಟರ್ಗಳು ಚೀನೀ ಉಪಕರಣಗಳ ಬಳಕೆಯನ್ನು ನಿರ್ಬಂಧಿಸುತ್ತದೆ.
ಭಾರತ ಮತ್ತು ಚೀನಾ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಒಂಬತ್ತು ತಿಂಗಳಿನಿಂದ ಸೇನೆಯಿದೆ. ಹಲವಾರು ಹಂತದ ಮಾತುಕತೆ ನಡೆದಿದ್ದು ಯಾವುದೇ ಪ್ರಗತಿ ಕಂಡು ಬಂದಿಲ್ಲ.