ನವದೆಹಲಿ, ಫೆ.09 (DaijiworldNews/MB) : ''ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ಓದಿದಾಗ, ನಾನು ಹಿಂದೂಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ'' ಎಂದು ಕಾಂಗ್ರೆಸ್ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಮಂಗಳವಾರ ಹೇಳಿದರು.
ಸದಸ್ಯತ್ವದಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಅವರು, ''ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬನಾಗಿರುವುದು ನನಗೆ ಸಂತೋಷ. ಪಾಕಿಸ್ತಾನದ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಓದಿದಾಗ ನಾನೊಬ್ಬ ಹಿಂದೂಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ'' ಎಂದರು.
ಇನ್ನು ಈ ವೇಳೆಯೇ 2005ರಲ್ಲಿ ತಾವು ಜಮ್ಮು–ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಉಗ್ರ ದಾಳಿಯ ಬಗ್ಗೆ ನೆನಪಿಸಿಕೊಂಡ ಅವರು, ''ಭಯೋತ್ಪಾದನೆ ಈ ದೇಶದಲ್ಲಿ ಕೊನೆಯಾಗಲಿ ಎಂದು ನಾನು ಅಲ್ಲಾನನ್ನು ಪ್ರಾರ್ಥಿಸುತ್ತೇನೆ'' ಎಂದು ಹೇಳಿದರು.
ಇದಕ್ಕೂ ಮುನ್ನ ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಶುಭ ವಿದಾಯ ಘೋಷಿಸುವ ವೇಳೆ ರಾಜ್ಯಸಭೆ ಕಲಾಪದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಗುಲಾಂ ನಬಿ ಆಜಾದ್ ಅವರ ಬಗ್ಗೆ ಮಾತನಾಡುತ್ತಾ ಭಾವುಕರಾದರು. ಹಾಗೆಯೇ ಆಜಾದ್ ಅವರನ್ನು ಶ್ಲಾಘಿಸಿದರು.