ದಾವಣಗೆರೆ,ಫೆ. 09 (DaijiworldNews/HR): "ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಹೋರಾಟ ನಡೆಸಲು ಅವಕಾಶ ನೀಡದಂತೆ ಪರಿಶಿಷ್ಟ ಪಂಗಡ(ಎಸ್ಟಿ ) ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಈ ಕುರಿತು ವಾಲ್ಮೀಕಿ ಜಾತ್ರೆಯಲ್ಲಿ ಮಾತನಾಡಿದ ಅವರು, "ನ್ಯಾಯಮೂರ್ತಿ ನಾಗಮೋಹನದಾಸ ಸಮಿತಿ ನೀಡಿರುವ ವರದಿ ಪರಿಶೀಲನೆ ಹಂತದಲ್ಲಿದ್ದು, ಸಚಿವ ಸಂಪುಟದಲ್ಲಿರುವ ವಾಲ್ಮೀಕಿ ಸಮುದಾಯದ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಸ್ವಾಮೀಜಿ ಯಾವುದೇ ಸಂಶಯ ಇಟ್ಟುಕೊಳ್ಳುವುದು ಬೇಡ" ಎಂದರು.
ಇನ್ನು ಇದಕ್ಕೂ ಮೊದಲು ಮಾತನಾಡಿದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, "ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡಿದರೆ ಅವರನ್ನು ಅಭಿನಂದಿಸುತ್ತೇವೆ. ಇಲ್ಲದಿದ್ದಲ್ಲಿ ಇದೇ ಜಾಗದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ. ನಾನೇನಾದರೂ ಸತ್ತರೆ ಸಮುದಾಯದವರು ನನ್ನ ಜೊತೆಗೆ ಇರುತ್ತೀರಲ್ಲವೇ" ಎಂದು ಕೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಾವಿನ ಮಾತು ಬೇಡ, ಆದಷ್ಟು ಬೇಗನೆ ಬೇಡಿಕೆ ಈಡೇರಿಸುತ್ತೇನೆ ಎಂದು ಸ್ವಾಮೀಜಿಗೆ ಭರವಸೆ ನೀಡಿದ್ದಾರೆ.
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಲಾಗುವುದು. ಬೇರೆ ಸಮುದಾಯದವರೂ ಎಸ್ಟಿಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸಮುದಾಯದವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.