ನವದೆಹಲಿ, ಫೆ.09 (DaijiworldNews/MB) : ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹಾಗೂ ನಿವೃತ್ತರಾಗುತ್ತಿರುವ ರಾಜ್ಯಸಭೆ ಸದಸ್ಯರಿಗೆ ವಿದಾಯ ಹೇಳುವ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ಶುಭ ವಿದಾಯ ಘೋಷಿಸುವ ವೇಳೆ ರಾಜ್ಯಸಭೆ ಕಲಾಪದಲ್ಲಿ ಅವರು ಮಾತನಾಡಿದರು.
''ಗುಲಾಂ ನಬಿ ಜೀ (ಪ್ರತಿಪಕ್ಷ ನಾಯಕ) ಅವರ ಸ್ಥಾನವನ್ನು ತುಂಬುವುದು ಕಷ್ಟ, ಅವರಂತೆ ಕಾರ್ಯ ನಿರ್ವಹಿಸುವುದು ಸುಲಭವಾದುದಲ್ಲ. ಅವರಿಗೆ ತಮ್ಮ ಪಕ್ಷದ ಮೇಲೆ ಮಾತ್ರವಲ್ಲ, ದೇಶ ಹಾಗೂ ಸದನದ ಮೇಲೆ ಕಾಳಜಿಯುಳ್ಳವರು ಅವರು'' ಎಂದು ಮೋದಿ ಹೇಳಿ ಗದ್ಗತರಾಗಿದ್ದಾರೆ. ಭಾವುಕರಾದ ಮೋದಿ ಅವರು, ನೀರು ಕುಡಿದು ಸುಧಾರಿಸಿಕೊಂಡು ಮತ್ತೆ ಮಾತು ಆರಂಭಿಸಿದರು.
''ಹುದ್ದೆ, ಉನ್ನತ ಅಧಿಕಾರಗಳು ಬರುತ್ತದೆ, ಹೋಗುತ್ತದೆ. ಆದರೆ ಅಧಿಕಾರ ಬಂದಾಗ ಅದನ್ನು ನಿರ್ವಹಿಸುವುದು ಹೇಗೆಂದು ಗುಲಾಂ ನಬಿ ಆಜಾದ್ ಜೀ ಅವರನ್ನು ನೋಡಿ ಕಲಿಯಬೇಕು. ನಾನು ಅವರನ್ನು ನಿಜವಾದ ಸ್ನೇಹಿತನಾಗಿ ಕಂಡಿದ್ದೇನೆ'' ಎಂದು ಹೇಳಿದರು.
ಇನ್ನು ಈ ವೇಳೆಯೇ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನೂ ಮೋದಿ ನೆನಪಿಸಿಕೊಂಡರು. ''ಉಗ್ರರ ದಾಳಿ ಸಂದರ್ಭ ಕಾಶ್ಮೀರದಲ್ಲಿ ಗುಜರಾತ್ನ ಜನರು ಸಿಲುಕಿದಾಗ ಅವರ ರಕ್ಷಣೆಗೆ ಪ್ರಣವ್ ಮುಖರ್ಜಿ ಹಾಗೂ ಗುಲಾಂ ನಬಿ ಆಜಾದ್ ಅವರು ಸಹಾಯ ಮಾಡಿದ್ದನ್ನು ಮರೆಯಲಾಗದು. ಆಜಾದ್ ಅವರು ತಮ್ಮ ಕುಟುಂಬಸ್ಥರೇ ಅಲ್ಲಿ ಸಿಲುಕಿದ್ದಾರೆ ಎಂಬಂತೆ ಕಾಳಜಿ ವಹಿಸಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ'' ಎಂದು ಶ್ಲಾಘಿಸಿದರು.