ಬೆಳಗಾವಿ, ಫೆ.09 (DaijiworldNews/MB) : ಕೇಂದ್ರವು ಅಂಗೀಕರಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಕಳೆದ 73 ದಿನಗಳಿಂದ ದೆಹಲಿಯಲ್ಲಿ ರೈತರು ಪಟ್ಟುಬಿಡದೆ ಹೋರಾಡುತ್ತಿದ್ದರೂ, ಬಾಲಿವುಡ್ ನಟಿ ಕಂಗನಾ ರಣಾವತ್ ಈ ಆಂದೋಲನದ ಬಗ್ಗೆ ವಿವಾದಾಸ್ಪದ ಟೀಕೆಗಳನ್ನು ಟ್ವೀಟ್ ಮೂಲಕ ಮಾಡುತ್ತಿರುವುದು ಕಂಡು ಬಂದಿದೆ. ನಗರದ ವಕೀಲರೊಬ್ಬರು ನಟಿಯ ಈ ಟ್ವೀಟ್ಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಕಂಗನಾ ವಿರುದ್ದ ದೂರು ದಾಖಲಿಸಿದ್ದಾರೆ. ಕಂಗನಾ ತನ್ನ ಟ್ವೀಟ್ಗಳ ಮೂಲಕ ತನ್ನ ಸೊಕ್ಕು ಮತ್ತು ಮೊಂಡುತನವನ್ನು ಪ್ರದರ್ಶಿಸುತ್ತಿದ್ದಾರೆ. ಆದ್ದರಿಂದ ಕಂಗನಾಳ ಟ್ವಿಟ್ಟರ್ ಖಾತೆಯನ್ನು ನಿಷೇಧಿಸಬೇಕು ಎಂದು ವಕೀಲರೊಬ್ಬರು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಒತ್ತಾಯಿಸಿ ರೈತರು ಹೋರಾಡುತ್ತಿದ್ದಾರೆ. ದೇಶಾದ್ಯಂತದ ವಿವಿಧ ರೈತ ಸಂಘಟನೆಗಳು ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿವೆ. ಆದರೆ, ಬಾಲಿವುಡ್ ನಟಿ ಕಂಗನಾ ರೈತರ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡುತ್ತಲ್ಲಿದ್ದಾರೆ. ಈ ಹೋರಾಟವು ಪಾಕಿಸ್ತಾನ ಮತ್ತು ಚೀನಾದ ಬೆಂಬಲದಿಂದ ನಡೆಯುತ್ತಿದೆ ಎಂದು ಕಂಗನಾ ದೂರಿರುವುದು ಮಾತ್ರವಲ್ಲದೇ ರೈತರನ್ನು ಭಯೋತ್ಪಾದಕರು ಮತ್ತು ಖಲಿಸ್ತಾನಿಗಳು ಎಂದು ಕರೆದಿದ್ದಾರೆ. ಕಂಗನಾರ ಈ ಟ್ವೀಟ್ಗಳಿಗೆ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿದೆ.
ಈ ವಿವಾದದ ಆಧಾರದ ಮೇಲೆ ನಗರದ ವಕೀಲ ಹರ್ಷವರ್ಧನ್ ಪಾಟೀಲ್ ಅವರು ತಿಲಕ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು, ಖ್ಯಾತ ನಟಿ ವಿರುದ್ಧ ಇನ್ನೂ ಎಫ್ಐಆರ್ ದಾಖಲಿಸಿಲ್ಲ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಕೀಲ ಹರ್ಷವರ್ಧನ್ ಪಾಟೀಲ್, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ತಿಲಕ್ವಾಡಿ ಪೊಲೀಸರನ್ನು ಒತ್ತಾಯಿಸಿದರು. ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದೆ ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ಕಂಗನಾರ ಟ್ವಿಟರ್ ಖಾತೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಹಲವಾರು ಅಂತರರಾಷ್ಟ್ರೀಯ ಗಣ್ಯರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ರೈತರ ಆಂದೋಲನವನ್ನು ಬೆಂಬಲಿಸಿದ್ದಾರೆ. ಆದರೆ ದೇಶದ ಅನೇಕ ನಟರು ಮತ್ತು ಕ್ರೀಡಾಪಟುಗಳು ದೇಶದ ಜನರು ತಮ್ಮದೇ ಆದ ಆಂತರಿಕ ಸಮಸ್ಯೆಗಳನ್ನು ಪರಿಹರಿಸಲಾಗುವುದು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಇಲ್ಲಿ ಮೂಗು ತೂರಿಸುವುದು ಬೇಡ ಎಂದು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದರೆ ಕಂಗನಾ ಅವರ ಟ್ವೀಟ್, ಅನೇಕರನ್ನು ತಪ್ಪಾದ ರೀತಿಯಲ್ಲಿ ಬಿಂಬಿಸಿದೆ ಎಂದು ಹೇಳಲಾಗಿದೆ. ಅವಹೇಳನಕಾರಿ ಹೇಳಿಕೆಯ ವಿರುದ್ದ ತುಮಕೂರಿನಲ್ಲಿ ನಟಿಯ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.
ಏತನ್ಮಧ್ಯೆ, ದ್ವೇಷವನ್ನು ಹರಡುವ ಮತ್ತು ರೈತರನ್ನು ಭಯೋತ್ಪಾದಕರು ಎಂದು ಕರೆದ ಕಾರಣಕ್ಕಾಗಿ ನಟಿಯ ಟ್ವಿಟ್ಟರ್ ಖಾತೆಯನ್ನು ನಿಷೇಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ವ್ಯಕ್ತವಾಗಿದೆ. ಕಂಗನಾ ವಿರುದ್ಧದ ಅರ್ಜಿಯಲ್ಲಿ ಕಂಗನಾರ ಇತ್ತೀಚಿನ ಟ್ವೀಟ್ಗಳು ರೈತರಿಗೆ ಹಾನಿ ಉಂಟು ಮಾಡಿದೆ ಎಂದು ದೂರಲಾಗಿದೆ. ಈವರೆಗೆ 1,47,566 ಜನರು ಅರ್ಜಿಗೆ ಸಹಿ ಹಾಕಿದ್ದಾರೆ.
#ModiPlanningFarmerGenocide ಸೇರಿದಂತೆ ವಿವಿಧ ಹ್ಯಾಶ್ಟ್ಯಾಗ್ಗಳನ್ನು ಟ್ವಿಟರ್ನಲ್ಲಿ ಬಳಸಲಾಗುತ್ತಿದೆ. ಕಂಗನಾ ಜನಾಂಗೀಯ ಹತ್ಯಾಕಾಂಡಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. 1984 ರ ಸಿಖ್ ನರಮೇಧವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ರೈತರ ವಿರುದ್ಧ ದ್ವೇಷ, ಹಾನಿ ಮತ್ತು ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ದೂರಲಾಗಿದೆ.