ಬೆಂಗಳೂರು, ಫೆ. 09 (DaijiworldNews/HR): "ವಿಧಾನ ಪರಿಷತ್ನಲ್ಲಿ ಬಿಜೆಪಿ ಸರ್ಕಾರ ಗೂಂಡಾಗಿರಿ ನಡೆಸಿ ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ಪಡೆದುಕೊಂಡಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಇಂದು ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ನ ಕಾಂಗ್ರೆಸ್ ಸದಸ್ಯರು, "ಸದನ ಸುಸ್ಥಿತಿಯಲ್ಲಿ ಇಲ್ಲದ ವೇಳೆಯಲ್ಲಿ ಮಸೂದೆಗೆ ಅಂಗೀಕಾರ ನೀಡಲಾಗಿದ್ದು, ಉಪ ಸಭಾಪತಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ" ಎಂದಿದ್ದಾರೆ.
ಬಳಿಕ ಸಿ.ಎಂ. ಇಬ್ರಾಹಿಂ ಮಾತನಾಡಿ, "ಗೂಂಡಾಗಿರಿಯ ಮಾದರಿಯಲ್ಲೇ ಸದನ ನಡೆಸಿದ್ದು, ಮತ ವಿಭಜನೆಗೆ ಆಗ್ರಹಿಸಿದರೂ ಉಪ ಸಭಾಪತಿ ಅವಕಾಶ ನೀಡಿಲ್ಲ. ಈ ಕುರಿತು ರಾಜ್ಯಪಾಲರಿಗೆ ದೂರು ನೀಡಲಾಗುವುದು. ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ, ಆರ್.ಬಿ.ತಿಮ್ಮಾಪೂರ, ಬಿ.ಕೆ. ಹರಿಪ್ರಸಾದ್, ಅಲ್ಲಂ ವೀರಭದ್ರಪ್ಪ, ನಜೀರ್ ಅಹ್ಮದ್, ಪಿ.ಆರ್. ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.