ಬೆಂಗಳೂರು,ಫೆ. 09 (DaijiworldNews/HR): "ಕೊರೊನಾ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಸರ್ಕಾರವು ಮುಂಚೂಣಿಯಲ್ಲಿದ್ದು, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ಕುರಿತು ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ನಡೆದ 100 ಹಾಸಿಗೆಗಳ ಮಾಡ್ಯುಲರ್ ಐಸಿಯು, ಆರ್ಟಿ-ಪಿಸಿಆರ್ ಪರೀಕ್ಷಾ ಕೇಂದ್ರ ಮತ್ತು ಆಮ್ಲಜನಕ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಸರ್ಕಾರವು ಮುಂಚೂಣಿಯಲ್ಲಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ನಾವು ಬದ್ಧರಾಗಿದ್ದು, ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬಹುದು" ಎಂದರು.
ಇನ್ನು "ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇದುವರೆಗೂ 2,162 ಮಂದಿಗೆ ಕೊರೊನಾ ಚಿಕಿತ್ಸೆ ನೀಡಲಾಗಿದ್ದು, ಪ್ರಧಾನ ಮಂತ್ರಿಗಳ ನಿಧಿ ಹಾಗೂ ಕೇಂದ್ರ ಸರ್ಕಾರದ ಸಹಕಾರದಿಂದ ಆಸ್ಪತ್ರೆಗೆ ವೆಂಟಿಲೇಟರ್ಗಳನ್ನು ಒದಗಿಸಲಾಗಿದೆ. 50 ಹಾಸಿಗೆಗಳ ಐಸಿಯುಗೆ ಸರ್ಕಾರದ ವತಿಯಿಂದ ಸುಮಾರು 4 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿ ಅಳವಡಿಸಲಾಗಿದ್ದು, ಗ್ಯಾಸ್ ಪೈಪ್ಲೈನ್ ಮೂಲಕ ದ್ರವ ರೂಪದಲ್ಲಿ ಆಮ್ಲಜನಕ ಪೂರೈಸುವ ಮೂಲಕ ತೀವ್ರ ನಿಗಾ ಘಟಕಗಳನ್ನು ಬಲಪಡಿಸಲಾಗಿದೆ. ಇವುಗಳನ್ನು ನಿರ್ವಹಿಸಲು ಹೆಚ್ಚಿನ ಸಿಬ್ಬಂದಿಯನ್ನು ಕೂಡ ನೇಮಿಸಲಾಗಿದೆ" ಎಂದು ಹೇಳಿದ್ದಾರೆ.