ನವದೆಹಲಿ, ಫೆ. 09 (DaijiworldNews/HR): ಜನವರಿ 12 ರಂದು ಹರಿಯಾಣದ ಕುಂಡ್ಲಿಯಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಂಜಾಬ್ನ ಟ್ರೇಡ್ ಯೂನಿಯನ್ ಕಾರ್ಯಕರ್ತೆ ನೌದೀಪ್ ಕೌರ್(23 ) ಎಂಬಾಕೆಯನ್ನು ಪೊಲಿಸರು ಬಂಧಿಸಿದ್ದು, ಜಾಮೀನು ಸಿಗದೆ ಒಂದು ತಿಂಗಳಿಂದ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಅಮೇರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸೊಸೆ ಮೀನಾ ಹ್ಯಾರಿಸ್ ಅವರು ನೌದೀಪ್ ಕೌರ್ ಅವರ ಬಿಡುಗಡೆಯನ್ನು ಕೋರಿ ಪೋಸ್ಟರ್ಗಳ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಜನವರಿ 12 ರಂದು ಅವರು ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ 20 ಜನರೊಂದಿಗೆ ವೇತನ ಕೋರಿ ಪ್ರತಿಭಟನೆ ನಡೆಸಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗಿದ್ದರಿಂದ ನೌದೀಪ್ ಅವರನ್ನು ಸಂಘದಿಂದ ವಜಾ ಮಾಡಲಾಗಿದ್ದು, ಬಳಿಕ ಬಂಧಿಸಿದ ಪೊಲೀಸರು, ಕೊಲೆ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಿದ್ದಾರೆ ಎಂದು ವರದಿಯಾಗಿದೆ.