ನವದೆಹಲಿ, ಫೆ. 09 (DaijiworldNews/HR): ದಕ್ಷಿಣ ದೆಹಲಿಯಲ್ಲಿ ಬೆಂಕಿ ಅವಘಡದಲ್ಲಿ ಕಟ್ಟಡವೊಂದರ ಟೆರೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವೃದ್ಧ ದಂಪತಿಯನ್ನು ಹೆಗಲು ಮೇಲೆ ಹೊತ್ತು ಪೊಲೀಸ್ ಕಾನ್ಸ್ಟೆಬಲ್ ರಕ್ಷಿಸಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೆ ಪ್ರವೇಶಿಸುವ ಮುಖ್ಯ ಗೇಟ್ ಲಾಕ್ ಆಗಿದ್ದು ಕಟ್ಟಡದಲ್ಲಿ 90 ವರ್ಷ ಮೇಲ್ಪಟ್ಟ ವೃದ್ಧ ದಂಪತಿಗಳಿದ್ದರು.ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸ್ ಕಾನ್ಸ್ಟೇಬಲ್ ವಿಕ್ರಮ್ ಸಮೀಪದ ಅಂಗಡಿಯಿಂದ ಸುತ್ತಿಗೆಯನ್ನು ತಂದು ಬೀಗವನ್ನು ಮುರಿದು ಅಗ್ನಿಶಾಮಕ ದಳ ನೇರವಾಗಿ ಪ್ರವೇಶಿಸಿ ಬೆಂಕಿ ನಂದಿಸಲು ನೆರವಾದರು. ಬಳಿಕ ಅವರ ಮನೆಗೆ ಸಂಪರ್ಕ ಕೊಟ್ಟಿದ್ದ ನೈಸರ್ಗಿಕ ಅನಿಲದ ಸರಬರಾಜನ್ನು ಕಡಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ,
ಇನ್ನು ಹೊತ್ತಿ ಉರಿಯುತ್ತಿದ್ದ ಮನೆಯ ಟೆರೇಸ್ನಲ್ಲಿ ಸಿಕ್ಕಿಬಿದ್ದ ವೃದ್ಧ ದಂಪತಿ ಬಗ್ಗೆ ಸ್ಥಳದಲ್ಲಿ ನೆರೆದಿದ್ದ ಜನ ವಿಕ್ರಮ್ಗೆ ಮಾಹಿತಿ ನೀಡಿದ್ದು, ಕೂಡಲೆ ಮಹಡಿ ತಲುಪಿದ ವಿಕ್ರಮ್ ಅವರನ್ನು ಹೆಗಲು ಮೇಲೆ ಹೊತ್ತು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.