ನವದೆಹಲಿ, ಫೆ.09 (DaijiworldNews/MB) : ದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವದ ದಿನ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬಿ ನಟ ದೀಪ್ ಸಿಧುವನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರು ಹಿಂಸಾಚಾರ ನಡೆಸಲು ಈತ ಕಾರಣ ಎಂದು ಆರೋಪವಿದೆ.
ಜನವರಿ 26ರ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ಕೆಲವರು ಕೆಂಪು ಕೋಟೆ ಮೇಲೆ ಏರಿ ಸಿಖ್ ಧ್ವಜ ಹಾರಿಸಿದ್ದರು. ಈ ಕೃತ್ಯ ಮಾಡುವಂತೆ ರೈತರಿಗೆ ಹೇಳಿದ್ದು ದೀಪ್ ಸಿಧು ಎಂಬ ಆರೋಪವಿದೆ. ಈತ ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸಂಸದ ನಟ ಸನ್ನಿ ಡಿಯೋಲ್ ಪರ ಪ್ರಚಾರದ ಮ್ಯಾನೇಜರ್ ಆಗಿದ್ದ. ಈತ ಪ್ರಧಾನಿ ಮೋದಿಯವರೊಂದಿಗೆ ನಿಂತು ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಈ ಆರೋಪ ಕೇಳಿಬರುತ್ತಿದ್ದಂತೆ ದೀಪ್ ಸಿಧು ತಲೆಮರೆಸಿಕೊಂಡಿದ್ದು ದೆಹಲಿ ಪೊಲೀಸರು ಈತನ ಪತ್ತೆಗಾಗಿ ಲುಕ್ ಔಟ್ ನೊಟೀಸ್ ಹೊರಡಿಸಿದ್ದರು.
"ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧು ಸೇರಿದಂತೆ ಪ್ರಮುಖ ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು" ಎಂದು ದೆಹಲಿ ಪೊಲೀಸರು ತಿಳಿಸಿದ್ದರು. ಪ್ರಮುಖ ಆರೋಪಿಗಳಾದ ನಟ ದೀಪ್ ಸಿಧು, ಜುಗ್ ರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಕುರಿತು ಮಾಹಿತಿ ನೀಡಿದವರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದರು.