ನವದೆಹಲಿ, ಫೆ.09 (DaijiworldNews/MB) : ಇ-ಕಾಮರ್ಸ್ನಲ್ಲಿ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು 34 ಸಾವಿರ ಕಳೆದುಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ವ್ಯಕ್ತಿಯೋರ್ವ ವೆಬ್ ಪೋರ್ಟಲ್ನಲ್ಲಿ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿದ್ದು ರೇಟ್ ಫಿಕ್ಸ್ ಆದ ಬಳಿಕ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಬಳಿಕ ಅದನ್ನು ಖಾತರಿಪಡಿಸಲು ಕ್ಯೂಆರ್ ಕೋಡ್ ಸ್ಕಾನ್ ಮಾಡುವಂತೆ ಹರ್ಷಿತಾಳಿಗೆ ಹೇಳಿದ್ದಾನೆ. ಆತ ಹೇಳಿದಂತೆ ಕೋಡ್ ಸ್ಕಾನ್ ಮಾಡಿದ ಕೂಡಲೇ ಹರ್ಷಿತಾ ಅವರ ಖಾತೆಯಿಂದ 20 ಸಾವಿರ ರೂಪಾಯಿ ಕಡಿತವಾಗಿದೆ. ಈ ಹಿನ್ನೆಲೆ ಹರ್ಷಿತಾ ಮತ್ತೆ ಆತನನ್ನು ಪ್ರಶ್ನಿಸಿದ್ದು ಆತ ತಪ್ಪಾಗಿ ಬೇರೆ ಕೋಡ್ ಕಳಿಸಿದ್ದೇನೆ, ಮತ್ತೊಂದು ಬಾರ್ ಕೋಡ್ ಕಳಿಸಿ ಅದನ್ನು ಸ್ಕಾನ್ ಮಾಡುವಂತೆ ಹೇಳಿದ್ದಾನೆ. ಆದರೆ ಅದರಲ್ಲಿ ಸ್ಕಾನ್ ಮಾಡುತ್ತಿದ್ದಂತೆ ಮತ್ತೆ 14 ಸಾವಿರ ರೂಪಾಯಿ ಖಾತೆಯಿಂದ ಕಡಿತವಾಗಿದೆ.
ಇವೆಲ್ಲವೂ ಮೋಸ ಎಂದು ತಿಳಿಯುತ್ತಿದ್ದಂತೆ ಹರ್ಷಿತಾ ಸಿವಿಲನ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.