ಚೆನ್ನೈ,ಫೆ. 08 (DaijiworldNews/SM): ನಾನು ಎಂದಿಗೂ ಗುಲಾಮಳಾಗುವುದಿಲ್ಲ. ಸಕ್ರಿಯ ರಾಜಕೀಯದಲ್ಲಿ ಮತ್ತೆ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚಿಗೆ ಬಿಡುಗಡೆಗೊಂಡ ಮಾಜಿ ಸಿಎಂ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ಹೇಳಿದ್ದಾರೆ.
ಈಗಾಗಲೇ ಶಶಿಕಲಾರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ಇನ್ನು ಇತ್ತೀಚಿಗಷ್ಟೇ ಜೈಲಿನಿಂದ ಬಿಡುಗಡೆಯಾಗಿ, ಕೋವಿಡ್ -19ಗೆ ಚಿಕಿತ್ಸೆ ಪಡೆದ ಬಳಿಕ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಿದ್ದಾರೆ.
ನಂತರ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ನಾನು ತಮಿಳುನಾಡಿನ ಜನರಿಗೆ ಋಣಿಯಾಗಿದ್ದೇನೆ. ಆದರೆ "ದಬ್ಬಾಳಿಕೆಯಿಂದ" ನಾನು ಹತಾಶಳಾಗುವುದಿಲ್ಲ ಎಂದಿದ್ದಾರೆ. ಉಳಿದಂತೆ ಪಕ್ಷದ ವಿಚಾರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದ್ದಾರೆ.