ಬಾಗಲಕೋಟೆ,ಫೆ. 08 (DaijiworldNews/HR): "ರಾಜ್ಯ ಸರ್ಕಾರ ಮುಂಬರುವ ಬಜೆಟ್ ಅಧಿವೇಶನದಲ್ಲಿ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಸಮುದಾಯದ ಶಕ್ತಿ ಪ್ರದರ್ಶನ ಅನಿವಾರ್ಯ" ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರವರ್ಗ 2ಎನಲ್ಲಿರುವ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ತಕ್ಷಣ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ 1 ಸಾವಿರ ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ನಾವು ಮನವಿ ಸಲ್ಲಿಸಿದ್ದು, ಅದಕ್ಕೆ ಅವರು ಪೂರಕವಾಗಿಯೇ ಸ್ಪಂದಿಸಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ" ಎಂದರು.
ಇನ್ನು "ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್. ಆರ್.ಪಾಟೀಲ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರಿಗೂ ಮನವಿ ಸಲ್ಲಿಸಿದ್ದು, ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದ ಅಗತ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ" ಎಂದು ಹೇಳಿದರು.