ನವದೆಹಲಿ, ಫೆ.08 (DaijiworldNews/PY): ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಕೇಂದ್ರಾಡಳಿತ ಪ್ರದೇಶದ ಕೇಡರ್ ಜೊತೆ ಜಮ್ಮು-ಕಾಶ್ಮೀರ ಕೇಡರ್ನ ನಾಗರಿಕ ಸೇವಾ ಅಧಿಕಾರಿಗಳನ್ನು ವಿಲೀನಗೊಳಿಸುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ಜಮ್ಮು-ಕಾಶ್ಮೀರ ತಿದ್ದುಪಡಿ ಮಸೂದೆ 2021ಅನ್ನು ಸೋಮವಾರ ರಾಜ್ಯಸಭೆ ಅಂಗೀಕರಿಸಿದೆ.
ಕಳೆದ ವಾರ ಸಂಸತ್ತಿನ ಮೇಲ್ಮನೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದ್ದು, ಚರ್ಚೆಯ ನಂತರ ಇಂದು ಅಂಗೀಕರಿಸಲಾಗಿದೆ.
"ಜಮ್ಮು-ಕಾಶ್ಮೀರದ ಮೇಲೆ ಭಾರತದ ಸಂವಿಧಾನವು ಈಗ ಸಂಪೂರ್ಣವಾಗಿ ಅನ್ವಯವಾಗುತ್ತಿದ್ದು, ಈ ಮಸೂದೆಯ ಮೂಲಕ ಕೇಂದ್ರಾಡಳಿತ ಪ್ರದೇಶದ ಅನುಭವ ಹೊಂದಿರುವ ಜಮ್ಮು-ಕಾಶ್ಮೀರದ ಅಧಿಕಾರಗಳ ಲಭ್ಯತೆಯನ್ನು ಒದಗಿಸುತ್ತದೆ" ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ತಿಳಿಸಿದ್ದಾರೆ.
"ಜಮ್ಮು-ಕಾಶ್ಮೀರದಲ್ಲಿ ಸುಮಾರು 170 ಕೇಂದ್ರ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಮಸೂದೆಯು ಜಮ್ಮು-ಕಾಶ್ಮೀರ ಹಾಗೂ ಲೇಹ್ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಧಿಕಾರಿಗಳ ಬಲವನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ.