ಲಖನೌ, ಫೆ.08 (DaijiworldNews/MB) : ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಜಾಗ ನಮ್ಮದು ಎಂದು ದೆಹಲಿ ಮೂಲದ ಇಬ್ಬರು ಸಹೋದರಿಯರು ಅಲಹಾಬಾದ್ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವವರು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲಾಗುತ್ತಿರುವ ಜಾಗ ನಮ್ಮದು, ಅಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ರಮೇಶ್ ಕುಮಾರ್ ಸಿಂಗ್ ಅವರು, ಸಹೋದರಿಯರ ಮನವಿಯನ್ನು ವಿರೋಧಿಸಿದರು. ಮಸೀದಿಗೆ ನಿಗದಿಪಡಿಸಿದ ಪ್ಲಾಟ್ ಸಂಖ್ಯೆಗಳು ಅರ್ಜಿಯಲ್ಲಿ ಉಲ್ಲೇಖಿಸಿದ ಸಂಖ್ಯೆಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದರು. ಅರ್ಜಿದಾರರ ಪರ ವಕೀಲ ಎಚ್ ಜಿ ಎಸ್ ಪರಿಹಾರ್ ಅವರು, ತಮ್ಮ ಅರ್ಜಿ ವಾಪಾಸ್ ಪಡೆಯುವುದಾಗಿ ಹೇಳಿದ ಬಳಿಕ ನ್ಯಾಯಮೂರ್ತಿಗಳಾದ ಡಿ ಕೆ ಉಪಾಧ್ಯಾಯ ಮತ್ತು ಮನೀಶ್ ಕುಮಾರ್ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.
ತಮ್ಮ ತಂದೆ ಜ್ಞಾನಚಂದ್ರ ಪಂಜಾಬಿ ಅವರು ದೇಶ ವಿಭಜನೆ ವೇಳೆ ಅಂದರೆ 1947ರಲ್ಲಿ ಭಾರತಕ್ಕೆ ಬಂದು, ಅಯೋಧ್ಯೆಯಲ್ಲಿ ನೆಲೆಸಿದ್ದು ಧನ್ನಿಪುರ ಗ್ರಾಮದಲ್ಲಿ ತಂದೆಗೆ ನಜುಲ್ ಇಲಾಖೆಯು 28 ಎಕರೆ ಜಮೀನನ್ನು ನೀಡಿತ್ತು. ಈ ಜಮೀನಿನ ಮಾಲಕತ್ವವನ್ನು 5 ವರ್ಷಗಳಿಗೆ ನೀಡಲಾಗಿದ್ದು ಆದರೆ ಅದು ಬಳಿಕವೂ ಮುಂದುವರಿಯಿತು. ಕಂದಾಯ ಇಲಾಖೆಯಲ್ಲಿರುವ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ತಂದೆ ಹೆಸರನ್ನು ಸೇರಿಸಲಾಗಿತ್ತು. ಬಳಿಕ ತಂದೆಯ ಹೆಸರನ್ನು ದಾಖಲೆಗಳಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ನಮ್ಮ ತಂದೆ ಅಯೋಧ್ಯೆಯಲ್ಲಿನ ನಜುಲ್ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಂತರ ಮತ್ತೆ ತಂದೆಯ ಹೆಸರನ್ನು ಅಧಿಕಾರಿಗಳು ದಾಖಲೆಗಳಿಂದ ತೆಗೆದುಹಾಕಿದ್ದಾರೆ. ಇದರ ವಿರುದ್ದ ಮೇಲ್ಮನವಿ ಸಲ್ಲಿಸಿದರೂ ಪರಿಗಣಿಸದೆ 28 ಎಕರೆ ಪೈಕಿ 5 ಎಕರೆಯನ್ನು ವಕ್ಫ್ ಬೋರ್ಡ್ಗೆ ಹಂಚಿಕೆ ಮಾಡಲಾಗಿದೆ ಎಂದು ಈ ಸಹೋದರಿಯರು ತಮ್ಮ ಅರ್ಜಿಯಲ್ಲಿ ದೂರಿದ್ದರು.