ಬೀದರ್, ಫೆ. 08 (DaijiworldNews/HR): "ಕರ್ನಾಟಕದ ಎಲ್ಲಾ ಸಂಸದರು ಬಾಯಿಗೆ ಬೀಗ ಹಾಕಿಕೊಂಡಿದ್ದರಿಂದ ರಾಜ್ಯದಲ್ಲಿ ಸತತವಾಗಿ ಅನ್ಯಾಯ ಆಗುತ್ತಿದೆ. ಕನ್ನಡಿಗರ ಹಿತ ಕಾಪಾಡದ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ" ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯಕ್ಕೆ ಜಿಎಸ್ಟಿ ಮತ್ತು ಪ್ರಕೃತಿ ವಿಕೋಪದಡಿ ಹಣ ಬರಲಿಲ್ಲ, ಈಗ ಕೇಂದ್ರ ಬಜೆಟ್ನಲ್ಲಿ ಕೂಡ ಯಾವುದೇ ಕೊಡುಗೆ ನೀಡದೆ ಅನ್ಯಾಯ ಮಾಡಲಾಗಿದ್ದು, ನಮ್ಮ ಸಂಸದರು ಪೇಪರ್ನಲ್ಲಿ ಹುಲಿ, ಪ್ರಧಾನಿ ಬಳಿ ಇಲಿ ಆಗುತ್ತಾರೆ" ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು "ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಂಸದರ ಸಭೆಯನ್ನು ಕರೆಸಿ ರಾಜ್ಯಕ್ಕೆ ಏನೆಲ್ಲ ಬೇಕು ಎಂಬುದರ ಚರ್ಚೆ ನಡೆಸಿ ಬೇಡಿಕೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದೆವು, ಆದರೆ ಈಗ ಬಜೆಟ್ ಪೂರ್ವ ಸಂಸದರ ಒಂದು ಸಭೆಯೂ ನಡೆಸಲಿಲ್ಲ" ಎಂದು ಹೇಳಿದ್ದಾರೆ.