ಹಾವೇರಿ, ಫೆ.08 (DaijiworldNews/PY): "ಹೆಣ್ಣು ಮಕ್ಕಳ ಜನನವನ್ನು ಸಂಭ್ರಮಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಪಾಲಿಸಬೇಕು" ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಹಿರೇಕೆರೂರು ಸಹಯೋಗದಲ್ಲಿ ಮಾಸೂರಿನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಗ ಹಾಗೂ ಮಗಳು ಸಮಾನರು ಎನ್ನುವುದು ನಮ್ಮ ಮಂತ್ರವಾಗಿರಬೇಕು ಎನ್ನುವ ಉದ್ದೇಶದಿಂದ ಬೇಟಿ ಬಚಾವೋ ಬೇಟಿ ಪಢಾವೋ ಎನ್ನುವ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿದ್ದಾರೆ" ಎಂದಿದ್ದಾರೆ.
"ಯಾರೊಬ್ಬರು ಕೂಡಾ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ ಎಂಬುದು ಪ್ರಗತಿಯ ಮಂತ್ರವಾಗಿದೆ. ಮಕ್ಕಳ ಇಚ್ಛೆಯ ಅನುಸಾರ ಪ್ರತಿಭೆಯನ್ನು ಪೋಷಿಸಬೇಕು. ತಮ್ಮ ಮಕ್ಕಳಿಗೆ ಪೋಷಕರು ಉತ್ತಮವಾದ ಶಿಕ್ಷಣ ನೀಡುವುದೇ ನಿಜವಾದ ಆಸ್ತಿ" ಎಂದು ತಿಳಿಸಿದ್ದಾರೆ.
"ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಆರಂಭಿಸಿದ ನಂತರ ಹೆಚ್ಚಿನ ಎಲ್ಲಾ ರಾಜ್ಯಗಳಲ್ಲಿಯೂ ಕೂಡಾ ಜಿಲ್ಲಾ ಕಾರ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮಗಳು ಹಾಗೂ ಹೆಚ್ಚು ಜನ ಸೇರುವ ಕಡೆ ಬೀದಿನಾಟಕಗಳನ್ನು ಪ್ರದರ್ಶನ ಮಾಡುವ ಮುಖಾಂತರ ಜನರನ್ನು ತಲುಪುವ ಕಾರ್ಯವಾಗುತ್ತಿದೆ" ಎಂದಿದ್ದಾರೆ.