ಬೆಂಗಳೂರು, ಫೆ.08 (DaijiworldNews/PY): ಎಐಎಂಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರು ಸೋಮವಾರ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ವೇಳೆ ಬೆಂಬಲಿಗರ ಎರಡು ಕಾರುಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕೃಷ್ಣಗಿರಿಯ ಟೋಲ್ಗೇಟ್ನಲ್ಲಿ ಶಶಿಕಲಾ ಅವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಂತ ವೇಳೆ ಪಟಾಕಿ ಸಿಡಿಸಲಾಗಿದೆ. ಈ ಸಂದರ್ಭ ಶಶಿಕಲಾ ಅವರ ಬೆಂಲಿಗರ ಎರಡು ಕಾರುಗಳಿಗೆ ಬೆಂಕಿ ತಗುಲಿದ ಕಾರಣ ಕಾರು ಬೆಂಕಿಗಾಹುತಿಯಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.
ಘಟನಾಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ ಎಂದು ವರದಿ ಹೇಳಿದೆ.
ಈ ನಡುವೆ ಶಶಿಕಲಾ ಅವರು ಹೊಸೂರಿನಲ್ಲಿರುವ ಮಾರಿಯಮ್ಮ ದೇಗುಲಕ್ಕೆ ತೆರಳಿದ್ದು, ಪೂಜೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.