ನವದೆಹಲಿ, ಫೆ.08 (DaijiworldNews/PY): ಚಮೋಲಿ ಜಿಲ್ಲೆಯಲ್ಲಿ ಫೆ.7ರ ರವಿವಾರದಂದು ಸಂಭವಿಸಿದ ಭಾರೀ ಹಿಮಪರ್ವತ ಕುಸಿತದ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದು, 150 ಮಂದಿ ಕಾಣೆಯಾಗಿದ್ದಾರೆ.
ಚಮೋಲಿಯ ಅವಘಡಕ್ಕೆ ಜಾಗತಿಕ ಮಟ್ಟದಲ್ಲಿ ಸಂತಾಪ ವ್ಯಕ್ತವಾಗಿದ್ದು, "ಈ ರೀತಿಯಾದ ಕಷ್ಟದ ಸಂದರ್ಭ ನಾವು ಭಾರತದೊಂದಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ" ಎಂದು ವಿಶ್ವ ನಾಯಕರು ತಿಳಿಸಿದ್ದಾರೆ.
"ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿ ಭಾರೀ ಹಿಮಪರ್ವತ ಕುಸಿತದ ಅವಘಡದಿಂದ ಮನಸ್ಸಿಗೆ ಆಘಾತವಾಗಿದೆ. ಈ ರೀತಿಯಾದ ಕಷ್ಟದ ಸಂದರ್ಭ ನಾವು ಭಾರತದೊಂದಿಗೆ ಬೆನ್ನೆಲುಬಾಗಿ ನಿಲ್ಲಲು ಸಿದ್ದರಿದ್ದೇವೆ" ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಟ್ವೀಟ್ ಮಾಡಿದ್ದು, "ಉತ್ತರಾಖಂಡದಲ್ಲಿ ಸಂಭವಿಸಿದ ಅವಘಡದಲ್ಲಿ ನೂರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಕೆಲ ಮಂದಿ ಮೃತಪಟ್ಟಿದ್ದಾರೆ. ಈ ಸಂದರ್ಭ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳುತ್ತೇವೆ ಹಾಗೂ ನಮ್ಮ ಸಂಪೂರ್ಣ ಬೆಂಬಲ ಭಾರತದೊಂದಿಗಿದೆ" ಎಂದಿದ್ದಾರೆ.
ನೇಪಾಳದ ವಿದೇಶಿ ವ್ಯವಹಾರಗಳ ಸಚಿವಾಲಯ ಸಂತಾಪ ವ್ಯಕ್ತಪಡಿಸಿದ್ದು, "ಚಮೋಲಿಯಲ್ಲಿ ನಡೆದ ಘಟನೆ ವಿಷಾದನೀಯ. ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವಾನ ತಿಳಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಚಮೋಲಿಯ ಘಟನೆಯ ಬಗ್ಗೆ ತುಂಬಾ ದುಃಖವಾಗಿದೆ. ಈ ಆಘಾತದಿಂದ ಉತ್ತರಾಖಂಡ ಶೀಘ್ರವೇ ಮುಕ್ತವಾಗಲಿ" ಎಂದು ಅಮೇರಿಕಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದು, "ಉತ್ತರಾಖಂಡದಲ್ಲಿ ನಡೆದ ಘಟನೆಯಿಂದ ಆಘಾತವಾಗಿದೆ. ಇಂತಹ ಕಷ್ಟ ಸಂದರ್ಭ ಆಸ್ಟ್ರೇಲಿಯ ಭಾರತದ ದುಃಖಕ್ಕೆ ಸ್ಪಂದಿಸಲಿದೆ" ಎಂದಿದ್ದಾರೆ.
"ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್ ಸೈಟ್ ತಪೋವನ್ ಸಮೀಪ 9 ಮೃತದೇಹಗಳು ಪತ್ತೆಯಾಗಿವೆ" ಎಂದು ಐಟಿಬಿಪಿಯ ಮಹಾ ನಿರ್ದೇಶಕ ಎಸ್ ಎಸ್ ದೇಶ್ವಾಲ್ ತಿಳಿಸಿದ್ದಾರೆ.