ನವದೆಹಲಿ, ಫೆ.08 (DaijiworldNews/MB) : ಸದನದಲ್ಲಿ ಕೃಷಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ಎಚ್ ಡಿ ದೇವೇಗೌಡಜೀ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ ದೇವೇಗೌಡರಿಗೆ ನಾನು ಆಭಾರಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ರೈತರ ಪ್ರತಿಭಟನೆ ಬಗ್ಗೆ 15 ಗಂಟೆಗಳ ಚರ್ಚೆ ನಡೆಸಲಾಗಿದ್ದು, ರಾಜ್ಯಸಭೆಯಲ್ಲಿ 50 ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಶ್ನಾವಳಿ ಅವಧಿ ಬಳಿಕ ಮಾತನಾಡಿದ ಪ್ರಧಾನಿಯವರು, ''ದೇವೇಗೌಡರ ಮಾತುಗಳು ಚರ್ಚೆಗೆ ಉತ್ತಮ ದೃಷ್ಟಿಕೋನವನ್ನು ನೀಡಿವೆ. ಸ್ವತಃ ಅವರೇ ಕೃಷಿ ಕ್ಷೇತ್ರದಲ್ಲಿ ತೊಡಗಿದ್ದಾರೆ'' ಎಂದು ಹೇಳಿದರು.
''ಎಲ್ಲರೂ ರಾಷ್ಟ್ರಪತಿ ಭಾಷಣದ ಸಂದರ್ಭ ಹಾಜರಿದ್ದರೆಂದು ನಾನು ಭಾವಿಸುತ್ತೇನೆ. ಅವರು ಮಾಡಿದ ಭಾಷಣ ಅತ್ಯಂತ ಶಕ್ತಿಶಾಲಿಯಾದುದ್ದಾಗಿದೆ. ಕೆಲವರು ಅನುಪಸ್ಥಿತಿ ಇದ್ದರೂ ಕೂಡಾ ಅವರ ಭಾಷಣೆ ಉತ್ತಮ ಪರಿಣಾಮ ಬೀರಿದೆ. ಭಾರತ ಅವಕಾಶಗಳ ನೆಲವಾಗಿದ್ದು, ನಮ್ಮನ್ನು ಹಲವಾರು ಅವಕಾಶಗಳು ಕಾಯುತ್ತಿದೆ'' ಎಂದರು.
''ನಮ್ಮ ಪ್ರಜಾಪ್ರಭುತ್ವ ಪಾಶ್ಚಿಮಾತ್ಯ ಸಂಸ್ಥೆಯಲ್ಲ. ಇದು ಮಾನವ ಸಂಸ್ಥೆ. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತದ ಇತಿಹಾಸವು ಪ್ರಜಾಪ್ರಭುತ್ವ ಸಂಸ್ಥೆಗಳ ಉದಾಹರಣೆಗಳಿಂದ ತುಂಬಿದೆ. ಪ್ರಾಚೀನ ಭಾರತದಲ್ಲಿ 81 ಪ್ರಜಾಪ್ರಭುತ್ವಗಳ ಉಲ್ಲೇಖವನ್ನು ನಾವು ಕಾಣುತ್ತೇವೆ. ಈ ಪಾಠಗಳನ್ನು ನಾವು ಮುಂಬರುವ ಪೀಳಿಗೆಗೆ ಕಲಿಸಬೇಕು. ನಾವು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ರಕ್ಷಿಸಬೇಕಾಗಿದೆ'' ಎಂದು ಹೇಳಿದರು.
''ಇಂದು ಜಗತ್ತೇ ಭಾರತದತ್ತ ಮುಖ ಮಾಡಿದೆ. ಭಾರತದ ಮೇಲೆ ಹಲವು ನಿರೀಕ್ಷೆಗಳಿವೆ. ಭೂಮಿಯ ಸುಧಾರಣೆಗೆ ಭಾರತ ಕೊಡುಗೆ ನೀಡುತ್ತದೆ ಎಂಬ ಎಂಬ ವಿಶ್ವಾಸವಿದೆ'' ಎಂದು ಕೂಡಾ ಇದೇ ವೇಳೆ ಹೇಳಿದರು.