ಬೆಂಗಳೂರು, ಫೆ.08 (DaijiworldNews/PY): ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಯ ಸಂದರ್ಭ, ಎಂಟಿಬಿ ನಾಗರಾಜ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಸಚಿವರುಗಳು, ಬಿಜೆಪಿ ಹಾಗೂ ಜನತಾದಳದ ಹಲವು ಶಾಸಕರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ಅವರು, "ಸಭಾಪತಿ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿ ಬೆಂಬಲದೊಂದಿಗೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ನವರು ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ" ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್, "ನಾವು ಬಸವರಾಜ್ ಹೊರಟ್ಟಿ ಅವರಿಗೆ ಪೂರ್ಣ ಬೆಂಬಲ ನೀಡಿದ್ದೇವೆ. ಒಂದುವೇಳೆ ಕಾಂಗ್ರೆಸ್ನಿಂದ ಅಭ್ಯರ್ಥಿ ಕಣಕ್ಕಿಳಿಯದೇ ಇದ್ದಲ್ಲಿ ಬಸವರಾಜ್ ಹೊರಟ್ಟಿಯವರೇ ಅವಿರೋಧವಾಗಿ ಆಯ್ಕೆಯಾಗುತ್ತಾರೆ" ಎಂದು ತಿಳಿಸಿದರು.
ಗೋಹತ್ಯೆ ತಿದ್ದುಪಡಿ ವಿಚಾರವಾಗಿ ಮಾತನಾಡಿದ ಅವರು, "ಗೋಹತ್ಯೆ ತಿದ್ದುಪಡಿಗೆ ವಿಧಾನ ಪರಿಷತ್ನಲ್ಲಿ ಅನುಮತಿ ಸಿಗುತ್ತದೆ. ಸಭಾಪತಿ ಆಯ್ಕೆ ನಂತರ ಜೆಡಿಎಸ್ನೊಂದಿಗೆ ಚರ್ಚೆ ನಡೆಸುತ್ತೇವೆ" ಎಂದು ಹೇಳಿದರು.