ಹರಿದ್ವಾರ, ಫೆ.08 (DaijiworldNews/PY): ಬಿಜೆಪಿ ನಾಯಕಿ ಉಮಾ ಭಾರತಿ ಅವರು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ದುರಂತಕ್ಕೆ ಬೇಸರ ವ್ಯಕ್ತಪಡಿಸಿದ್ದು, "ಗಂಗಾ ನದಿ ಹಾಗೂ ಉಪನದಿ ಬಳಸಿ ಯಾವುದೇ ಪ್ರಮಾಣದ ವಿದ್ಯುತ್ ಯೋಜನೆಗೆ ನಾನು ವಿರೋಧಿಸಿದ್ದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹಿಮಾಲಯದಲ್ಲಿ ಜಲ ವಿದ್ಯುತ್ ಯೋಜನೆ ನಿರ್ಮಾಣಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಈ ದುರಂತ ನಮಗೆ ಅಪಾಯದ ಮುನ್ಸೂಚನೆಯಾಗಿದೆ" ಎಂದಿದ್ದಾರೆ.
"ನಾನು ಸಚಿವೆಯಾಗಿದ್ದ ಸಂದರ್ಭ ನನ್ನ ಸಚಿವಾಲಯದಿಂದ ಉತ್ತರಾಖಂಡ ರಾಜ್ಯದ ಹಿಮಾಲಯದಲ್ಲಿ ಅಣೆಕಟ್ಟು ನಿರ್ಮಾಣ, ವಿದ್ಯುತ್ ಯೋಜನೆ ವಿಚಾರದ ಬಗ್ಗೆ ತೀವ್ರವಾದ ಕಾಳಜಿ ಹೊಂದಲಾಗಿತ್ತು. ಇದು ಅತ್ಯಂತ ಸೂಕ್ಷ್ಮವಾದ ಪ್ರದೇಶವಾಗಿದೆ. ಗಂಗಾ ಹಾಗೂ ಗಂಗಾ ನದಿಯ ಉಪ ನದಿಯನ್ನು ವಿರೋಧಿಸಿ ಅಫಿಡವಿಟ್ ಮಾಡಲಾಗಿತ್ತು" ಎಂದು ಹೇಳಿದ್ದಾರೆ.
"ವಿದ್ಯುತ್ ಕೊರತೆ ಹಾಗೂ ಬೇಡಿಕೆಯನ್ನು ಬೇರೆ ರೀತಿಯಾಗಿ ಪೂರೈಕೆ ಮಾಡಬಹುದಾಗಿತ್ತು. ರಾಜ್ಯಗಳಿಗೆ ರಾಷ್ಟ್ರೀಯ ಗ್ರಿಡ್ಗಳಿಂದ ದೊರೆಯುವ ಪಾಲು ಸರಿ ಹೊಂದಿಸಬಹುದಾಗಿದೆ" ಎಂದಿದ್ದಾರೆ.
ಚಮೋಲಿ ಜಿಲ್ಲೆಯ ಜೋಶಿಮಠ ಬಳಿಯ ನಂದಾದೇವಿ ಹಿಮಪರ್ವತದ ಭಾಗ ಕುಸಿತವಾಗಿ ದೌಲಿಗಂಗಾ, ಅಲಕಾನಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ತಪೋವನ್ ರೇನಿ ಭಾಗದಲ್ಲಿ ಋಷಿಗಂಗಾ ಹೈಡ್ರೋ ಪವರ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಮೀಪದ ಸುರಂಗದಲ್ಲಿ ಸಿಲುಕಿದ್ದ 50ಕ್ಕೂ ಹೆಚ್ಚು ಮಂದಿ ಕಾರ್ಮಿಕರ ರಕ್ಷಣೆ ಕಾರ್ಯವನ್ನು ಐಟಿಬಿಪಿ ಮುಂದುವರೆಸಿದ್ದು, 10 ಮಂದಿಯನ್ನು ರಕ್ಷಿಸಿದೆ.
ಮಿಲಿಟರಿ ಪಡೆ ಕೂಡಾ ಎನ್ಡಿಆರ್ಎಫ್ನೊಂದಿಗೆ ಕಾರ್ಯಾಚರಣೆ, ವೈದ್ಯಕೀಯ ನೆರವು ಕಾರ್ಯದಲ್ಲಿ ತೊಡಗಕೊಂಡಿದೆ.