ವಿಜಯಪುರ, ಫೆ.08 (DaijiworldNews/MB) : ''ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವವರು ನಿಜವಾದ ರೈತರೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ'' ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ನಗರದಲ್ಲಿ ಆಯೋಜಿಸಲಾಗಿದ್ದ ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸುವ ಮಹಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ವಾಮೀಜಿ ನಗರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಾನು ಗಮನಿಸಿದ್ದೇನೆ. ಭಾರತೀಯ ರಾಷ್ಟ್ರೀಯ ಧ್ವಜವನ್ನು ತುಳಿಯುವುದು, ಧ್ವಜವನ್ನು ಸುಡುವುದು, ಕೆಂಪು ಕೋಟೆಯಲ್ಲಿ ಹಾರಿಸಲಾಗಿದ್ದ ರಾಷ್ಟ್ರೀಯ ಧ್ವಜವನ್ನು ಕೆಳಕ್ಕೆ ಇಳಿಸುವುದು, ಸಂವಿಧಾನದ ನಕಲನ್ನು ಹರಿದು ಹಾಕುವುದು, ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವುದು, ಮುಂತಾದ ಕಾರ್ಯಗಳನ್ನು ಗಮನಿಸಿದಾಗ ಪ್ರತಿಭಟನೆಯು ತನ್ನ ದಿಕ್ಕನ್ನು ಕಳೆದುಕೊಂಡಿದೆ ಎಂದು ತೋರುತ್ತದೆ" ಎಂದು ಅವರು ಹೇಳಿದರು.
"ಈ ವಿಷಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು ಸರಿಯಾಗಿದೆ. ಕೇಂದ್ರ ಸರ್ಕಾರವು ರೈತರನ್ನು ಮತ್ತೆ ಮತ್ತೆ ಮಾತುಕತೆಗೆ ಆಹ್ವಾನಿಸುತ್ತಿದೆ. ಕಾನೂನಿನ ಬಗ್ಗೆ ಸ್ಪಷ್ಟವಾದ ಅರಿವಿಲ್ಲದೆ ಪ್ರತಿಭಟನೆಯನ್ನು ಮುಂದುವರಿಸುವ ರೈತರ ಕ್ರಮ ಸರಿಯಲ್ಲ" ಎಂದು ಶ್ರೀಗಳು ಅಭಿಪ್ರಾಯಿಸಿದರು.
"ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮ ಮಂದಿರವು ಭವ್ಯವಾದ ರಚನೆಯಾಗಲಿದೆ. ಇದು ಭಾರತೀಯ ಹಿಂದೂ ಸಂಸ್ಕೃತಿಯ ಸಮರ್ಪಣೆಯ ಲಾಂಭನವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಸನಾತನ ಧರ್ಮವನ್ನು ಅನುಸರಿಸುವವರೆಲ್ಲರೂ, ಹಿಂದೂಗಳು ಮತ್ತು ಭಗವಂತ ರಾಮನ ಪ್ರೇಮಿಗಳು ಈ ಉದಾತ್ತ ಉದ್ದೇಶಕ್ಕಾಗಿ ಉದಾರವಾಗಿ ಕೊಡುಗೆ ನೀಡುತ್ತಿದ್ದಾರೆ. ಈ ಹಣವನ್ನು ಮಂದಿರಕ್ಕೆ ಅರ್ಪಿಸಲಾಗುವುದು. ನಮಗೆ ಭೇಟಿ ನೀಡಲು ಸಾಧ್ಯವಾದಲ್ಲೆಲ್ಲಾ ನಾವು ಭೇಟಿ ನೀಡಿ ಹಣವನ್ನು ಸಂಗ್ರಹಿಸುತ್ತಿದ್ದೇವೆ" ಎಂದು ಸ್ವಾಮೀಜಿ ತಿಳಿಸಿದರು.
"ಭಗವಂತ ರಾಮ ಓರ್ವ ಸದ್ಗುಣಶೀಲ ಮನುಷ್ಯ, ಅವನ ಸದ್ಗುಣವನ್ನು ಮಕ್ಕಳಿಗೆ ಕಲಿಸಬೇಕು. ರಾಮಾಯಣದಲ್ಲಿ ಇಬ್ಬರು ವ್ಯಕ್ತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೇಗೆ ಜೀವನವನ್ನು ನಡೆಸಬೇಕು ಎಂಬುದನ್ನು ರಾಮ ತೋರಿಸಿದರೆ, ಹೇಗೆ ಜೀವನವನ್ನು ನಡೆಸಬಾರದು ಎಂಬುದಕ್ಕೆ ರಾವಣನು ಒಂದು ಉದಾಹರಣೆ. ಇವೆರಡರ ನಡುವೆ ಆಯ್ಕೆ ಮಾಡುವುದು ಮುಖ್ಯ'' ಎಂದು ಹೇಳಿದರು.