ವಿಜಯಪುರ, ಫೆ.08 (DaijiworldNews/MB) : ''ಅಯೋಧ್ಯೆಯ ರಾಮ ದೇವಸ್ಥಾನಕ್ಕೆ ಶೀಘ್ರದಲ್ಲೇ ನಿರ್ಮಾಣ ಕಾರ್ಯ ನಡೆಯಲಿದೆ, ಮುಂದೆ ಮಥುರಾದ ಕಾಶಿ ಎಂಬಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು'' ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ ತಿಳಿಸಿದ್ದಾರೆ.
"ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಕಾಶಿ ಮತ್ತು ಮಥುರಾದಲ್ಲಿ ದೇವಾಲಯಗಳ ನಿರ್ಮಾಣ ಬಾಕಿ ಇದೆ" ಎಂದು ವಿಜಯಪುರ ಶಾಸಕ ಯತ್ನಾಳ್ ಹೇಳಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪರವಾಗಿ ಆಯೋಜಿಸಿದ್ದ ನಿಧಿಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು ರಾಮ ಮಂದಿರ ನಿರ್ಮಾಣಕ್ಕಾಗಿ 5 ಲಕ್ಷ ರೂ. ದೇಣಿಗೆ ನೀಡಿದರು.
"ರಾಮ ಮಂದಿರವನ್ನು ಶೀಘ್ರದಲ್ಲೇ ಅಯೋಧ್ಯೆಯಲ್ಲಿ ನಿರ್ಮಿಸಲಾಗುವುದು. ಇನ್ನು ವಿಶ್ವನಾಥ ಮಂದಿರವನ್ನು ಕಾಶಿಯಲ್ಲಿ ನಿರ್ಮಿಸಬೇಕಾಗಿದೆ. ಶ್ರೀಕೃಷ್ಣನ ಜನ್ಮಸ್ಥಳ ಮಥುರಾವನ್ನು ಸ್ವತಂತ್ರಗೊಳಿಸಬೇಕಾಗಿದೆ. ಇದಕ್ಕೆ ಅಯೋಧ್ಯೆಯಂತಹ ಚಳುವಳಿ ಅಗತ್ಯವಿಲ್ಲ. ದೇಶದಲ್ಲಿ ಪ್ರಸ್ತುತ ರಾಷ್ಟ್ರಪತಿಯಿಂದ ಕೇಂದ್ರದ ಸರ್ಕಾರದವರೆಗೂ ಬಿಜೆಪಿಯೇ'' ಎಂದರು.
''1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ನೆನಪಿಸಿಕೊಂಡ ಯತ್ನಾಳ್, "ನಾನು ಆ ದಿನ ಅಯೋಧ್ಯೆಯಲ್ಲಿದ್ದೆ. ಬಾಬರಿ ಮಸೀದಿ ಬೀಳುತ್ತಿರುವುದನ್ನು ನಾನು ನೋಡಿದ್ದೇನೆ. ರಾಮ ಮಂದಿರ ನಿರ್ಮಾಣಕ್ಕಾಗಿ ಪೇಜಾವರ ಶ್ರೀಗಳು ಪಟ್ಟುಹಿಡಿದು ಕೆಲಸ ಮಾಡಿದರು. ದಲಿತ, ಲಿಂಗಾಯಿತ ಎಂಬ ಭೇದ ಭಾವ ಮಾಡದೆ ಅವರು ಹಿಂದೂ ಸಮುದಾಯವನ್ನು ಒಂದುಗೂಡಿಸಿದರು. ಕಳೆದ ಹಲವಾರು ವರ್ಷಗಳಿಂದ ಜನರು ರಾಮ ಮಂದಿರ ನಿರ್ಮಾಣದ ಬಗ್ಗೆ ಅನುಮಾನಗಳನ್ನು ಹೊಂದಿದ್ದರು. ಮಂದಿರ ನಿರ್ಮಾಣ ಯಾವಾಗ ಎಂದು ಬಿಜೆಪಿ ಪ್ರತಿನಿಧಿಗಳನ್ನು ಜನರು ಕೇಳುತ್ತಿದ್ದರು. ಮತದಾರರನ್ನು ಆಕರ್ಷಿಸಲು ಬಿಜೆಪಿ ಈ ವಿಷಯವನ್ನು ಬಳಸುತ್ತಿದೆ ಎಂಬ ಆರೋಪಗಳೂ ಇದ್ದವು. ಆದರೆ, ಇಂದು ಅಶೋಕ್ ಸಿಂಘಾಲ್, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರೊಂದಿಗೆ ಪ್ರಾರಂಭವಾದ ಹೋರಾಟವು ಫಲವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದೆ'' ಎಂದು ಹೇಳಿದರು.
ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿದೆ. ಹನುಮ ಜನಿಸಿದ ಅಂಜನೇಯಾದ್ರಿ ಬೆಟ್ಟ ಪ್ರದೇಶದ ಅಭಿವೃದ್ಧಿ ಮಾಡಬೇಕಾಗಿದೆ. ಇದನ್ನು ರಾಮ ಮಂದಿರ ನಿರ್ಮಾಣದ ವ್ಯಾಪ್ತಿಯಲ್ಲಿ ಸೇರಿಸಬೇಕು ಮತ್ತು ಹನುಮಾನ್ ಬೆಟ್ಟಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಯತ್ನಾಳ್ ವಿನಂತಿಸಿದರು.
''ಅಂಜನೇಯಾದ್ರಿ ಬೆಟ್ಟಗಳನ್ನು ಅಭಿವೃದ್ಧಿಪಡಿಸುವ ಮೂಲಕ ರಾಮ ಮತ್ತು ಅವರ ಭಕ್ತ ಹನುಮಂತನ ನಡುವಿನ ಸಂಬಂಧವನ್ನು ವೈಭವೀಕರಿಸಲಾಗುವುದು'' ಎಂದು ಯತ್ನಾಳ್ ಹೇಳಿದರು.