ಬೆಂಗಳೂರು, ಫೆ.07 (DaijiworldNews/PY): ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ಪ್ರಮುಖ ಎನ್ಆರ್ಐ ಉದ್ಯಮಿ ರೊನಾಲ್ಡ್ ಕೊಲಾಸೋ ಅವರ ನೇತೃತ್ವದ ಕ್ರೈಸ್ತ ಸಮುದಾಯದ ಸದಸ್ಯರು ಕೈಜೋಡಿಸಿದ್ದು, 1 ಕೋಟಿ.ರೂ ದೇಣಿಗೆ ನೀಡಿದ್ದಾರೆ.
ರವಿವಾರ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಎನ್ಆರ್ಐಗಳು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು ಭಾಗವಹಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ.
ಅಶ್ವತ್ಥ ನಾರಾಯಣ ಅವರು ಮಾತನಾಡಿ, "ಬಿಜೆಪಿ ಜನಪರವಾದ ಕ್ರಮಗಳನ್ನು ನಂಬುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಎನ್ನುವುದು ಬಿಜೆಪಿಯ ಮಂತ್ರ. ಬಿಜೆಪಿ ಸರ್ವರನ್ನು ಒಳಗೊಂಡಿರುವ ಪಕ್ಷ" ಎಂದಿದ್ದಾರೆ.
"ಕ್ರೈಸ್ತ ಸಮುದಾಯದ ಪರವಾಗಿ ಮಾತನಾಡಿದ ಉದ್ಯಮಿ ಡಾ. ರೊನಾಲ್ಡ್ ಕೊಲಾಸೋ ಅವರು, ರಾಷ್ಟ್ರ ಹಾಗೂ ಸಾಮಾಜಿಕ ಸಾಮರಸ್ಯದ ಬಗ್ಗೆ ಸಮುದಾಯ ಯಾವಾಗಲೂ ಸ್ಪಂದಿಸುತ್ತದೆ" ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ದಿ ನಿಗಮ ಸ್ಥಾಪನೆಯಾದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, "ಅದಕ್ಕೆ 200 ಕೋಟಿ.ರೂ ಅನುದಾನ ನೀಡಲಾಗಿದೆ" ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಂತ ಜೋಸೆಫ್ ವಿಶ್ವವಿದ್ಯಾಲಯ ಸ್ಥಾಪನೆಗೆ ವಿಧಾನಮಂಡಲದಲ್ಲಿ ಮಸೂದೆ ಅಂಗೀಕಾರವಾಗಲು ಶ್ರಮಿಸಿದ ಸಚಿವ ಅಶ್ವತ್ಥ್ ನಾರಾಯಣ ಅವರಿಗೆ ಕ್ರೈಸ್ತ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಬೆಂಗಳೂರಿನ ಮಾಲ್ಡೀವ್ಸ್ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಡಾ. ಜೋಸೆಫ್ ವಿ.ಜಿ., ಉದ್ಯಮಿಗಳಾದ ಜೋಸೆಫ್ ಫ್ರಾನ್ಸಿಸ್, ಸಿ.ಜೆ.ಬಾಬು, ಸಿಲ್ವಿಯಾನ್ ನೊರೆನ್ಹಾ, ಕ್ಲ್ಯಾಡ್ಯುಯಸ್ ಪೆರೆರಾ, ಡಾ.ಥಾಮಸ್ ಟಿ. ಜಾನ್, ಚಾರ್ಲ್ಸ್ ಗೋಮ್ಸ್, ರೋಶನ್ ಡಿಸಿಲ್ವ, ನಿಗೆಲ್ ಫರ್ನಾಂಡೀಸ್, ಸಂತೋಷ್ ಸೀಕ್ವೆರಿಯಾ, ಕ್ಲಾರೆನ್ಸ್ ಪೆರೆರಾ, ಪ್ರಮೋದ್ ಡಿಸೋಜ, ಎಂ.ಎಕ್ಸ್,ರಾಜು, ಡಾ.ಕೆ.ಸಿ.ಸ್ಯಾಮ್ಯುಯಲ್, ಅರುಣ್ ಫರ್ನಾಂಡೀಸ್, ಡಾ.ಸಂತೋಷ್ ಕೋಶಿ, ಪಿ.ಕೆ. ಚೆರಿಯನ್, ಸಿ.ಜಿ.ವರ್ಗೀಸ್, ಮನೋಜ್ ರಾಜ್, ಐವಾನ್ ಡಿʼಕೋಸ್ಟಾ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಜೆ ಜೋ ಜೋಸೆಫ್ ಉಪಸ್ಥಿತರಿದ್ದರು.