ಮುಂಬೈ, ಫೆ.07 (DaijiworldNews/PY): ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಬೃಹನ್ಮುಂಬಯಿ ಮಲಬಾರ್ಹಿಲ್ನ ಮಹಾರಾಷ್ಟ್ರ ರಾಜಭವನದಲ್ಲಿ ಭೇಟಿಯಾದರು.
ಶ್ರೀ ಅಯೋಧ್ಯ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ನ ಟ್ರಸ್ಟಿಯಾಗಿ ನೇಮಕಗೊಂಡಿರುವ ಪೇಜಾವರ ಶ್ರೀಗಳು ರಾಜ್ಯಪಾಲರನ್ನು ಭೇಟಿಯಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಕೋರಿದರು.
"ಎಲ್ಲವೂ ಶ್ರೀ ಕೃಷ್ಣನ ಅನುಗ್ರಹ. ಜನರೆಂಬ ಪಾರ್ಥನ ಪ್ರಯತ್ನ ಅಲ್ಲ. ಆರಾಧನೆಯಿಂದ ಒಳ್ಳೆಯ ಸಂಪತ್ತು ಮತ್ತು ವಿಜಯ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಪೂಜೆ, ಪುರಸ್ಕಾರ, ಆರಾಧನಾ ಕೇಂದ್ರವಾಗಿ ರೂಪುಗೊಳ್ಳುವ ಭವ್ಯ ಶ್ರೀರಾಮ ಮಂದಿರ ಇಂತಹ ಸಿದ್ಧಿಗೆ ಇಂತಹ ಪಾವಿತ್ರ್ಯತಾ ಕೇಂದ್ರ ಅತ್ಯವಶ್ಯಕ. ಮಹಾರಾಷ್ಟ್ರ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರು ಶ್ರೀರಾಮ ಮಂದಿರದ ನಿಧಿ ಸಂಗ್ರಹಣೆಗಾಗಿ ತಮ್ಮ ಉದಾತ್ತತೆ ತೋರಬೇಕು. ರಾಜ್ಯದ ಜನತೆಯಲ್ಲೂ ಶ್ರೀರಾಮ ದೇವರ ಆರಾಧ್ಯಕೇಂದ್ರದ ಅರಿವು ಮೂಡಿಸಿ ಇದೊಂದು ಸಮಸ್ತ ಭಕ್ತರ ಶ್ರದ್ಧಾಕೇಂದ್ರ ಆಗಿಸುವ ಪ್ರಯತ್ನ ನಡೆಸುವ ಆಶಯ ನಮ್ಮದಾಗಿದೆ" ಎಂದು ಪೇಜಾವರಶ್ರೀ ತಿಳಿಸಿದರು
ಈ ಸಂದರ್ಭದಲ್ಲಿ ನಾಗಾಲ್ಯಾಂಡ್ನ ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ, ವಿಶ್ವ ಹಿಂದೂ ಪರಿಷತ್ತ್ ಮಹಾರಾಷ್ಟ್ರ ಕಾರ್ಯದರ್ಶಿ ರಾಮಚಂದ್ರ ರಾಮುಕಾ, ಕೋಶಾಧಿಕಾರಿ ರಾವ್ ಸ್ವರೂಪ್ ಅಗರ್ವಾಲ್, ಪೇಜಾವರ ಮಠ ಮುಂಬೈ ಶಾಖೆಯ ವ್ಯವಸ್ಥಾಪಕ ಡಾ.ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ ಉಪಸ್ಥಿತರಿದ್ದರು.