ನವದೆಹಲಿ, ಫೆ.07 (DaijiworldNews/PY): "ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರೀ ಹಿಮಪ್ರವಾಹ ಉಂಟಾಗಿರುವ ಹಿನ್ನೆಲೆ ಪ್ರವಾಹ ಸ್ಥಿತಿ ಉಂಟಾಗಿದ್ದು, ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 150ಕ್ಕೂ ಅಧಿಕ ಮಂದಿ ಕಾರ್ಮಿಕರು ಕಾಣೆಯಾಗಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ರವಿವಾರ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಪ್ರವಾಹ ಹಿನ್ನೆಲೆ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲಾ ರೀತಿಯಾದ ನೆರವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪ್ರವಾಹ ಪೀಡಿತ ಜನರ ರಕ್ಷಣೆ ಹಾಗೂ ಕಾರ್ಯಾಚರಣೆಯ ಸಲುವಾಗಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಸೇನಾ ಪಡೆಗಳನ್ನು ದೆಹಲಿಯಿಂದ ವಿಮಾನದಲ್ಲಿ ರವಾನಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಪ್ರವಾಹದ ಬಗ್ಗೆ ನಾನು ಉತ್ತರಾಖಂಡ ಸಿಎಂ ಅವರೊಂದಿಗೆ, ಐಟಿಬಿಪಿ ಡಿಜಿ ಹಾಗೂ ಎನ್ಡಿಆರ್ಎಫ್ ಡಿಜಿ ಮಾತನಾಡಿದ್ದು, ಜನರನ್ನು ರಕ್ಷಿಸಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಗೆ ತೆರಳಿವೆ. ಇಲ್ಲಿಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಾಗುವುದು" ಎಂದಿದ್ದಾರೆ.
"ಎನ್ಡಿಆರ್ಎಫ್ನ ಇನ್ನೂ ಕೆಲವು ತಂಡಗಳು ದೆಹಲಿಯಿಂದ ವಿಮಾನದಲ್ಲಿ ಉತ್ತರಾಖಂಡಕ್ಕೆ ಕಳುಹಿಸಲಾಗುತ್ತಿದೆ. ಉತ್ತರಾಖಂಡದ ಪರಿಸ್ಥಿತಿಯನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಡೆಹಾರೂನ್ಗೆ ಒಟ್ಟು ನಾಲ್ಕು ಎನ್ಡಿಆರ್ಎಫ್ ತಂಡಗಳನ್ನು ವಿಮಾನದಲ್ಲಿ ಕಳುಹಿಸಲಾಗುತ್ತಿದ್ದು, ಅವರು ಜೋಶಿಮಠವನ್ನು ತಲುಪಲಿದ್ದಾರೆ" ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.