ಗುವಾಹಟಿ, ಫೆ.07 (DaijiworldNews/PY): "ಭಾರತವನ್ನು ಹಾಗೂ ವಿಶೇಷವಾಗಿ ಭಾರತದ ಚಹಾವನ್ನು ಕೆಡಿಸಲು ಪಿತೂರಿ ನಡೆಸಲಾಗುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಸ್ಸಾಂನ ಸೊನಿತ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಭಾರತದ ಚಹಾದ ಹೆಸರನ್ನು ಕೆಡಿಸಲು ವ್ಯವಸ್ಥಿತವಾದ ಪಿತೂರಿ ಮಾಡಲು ಯತ್ನಿಸುತ್ತಿದ್ದಾರೆ. ಭಾರತದ ಹೊರಗಿನ ಕೆಲವು ಭಾರತದ ಚಹಾ ಹಾಗೂ ಇದಕ್ಕೆ ಸಂಬಂಧಪಟ್ಟ ರಾಷ್ಟ್ರದ ಭಾವನೆಗಳನ್ನು ಕೆಡಿಸಲು ಯತ್ನಿಸುತ್ತಿದ್ದಾರೆ ಎನ್ನುವುದು ಬಹಿರಂಗಪಡಿಸುವ ಕೆಲ ದಾಖಲೆಗಳು ಹೊರಬಂದಿವೆ" ಎಂದು ತಿಳಿಸಿದರು.
"ಈ ರೀತಿಯಾದ ಕುಕೃತ್ಯಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ?. ಇಂತಹ ನೀಚ ಕಾರ್ಯಗಳಲ್ಲಿ ತೊಡಗಿಸಿಕೊಂಡವನ್ನು ಸ್ವೀಕರಿಸಲು ಸಾಧ್ಯವೇ?. ಈ ಸಂಚುಕೋರರನ್ನು ಹೊಗಳುವವ ಮಂದಿಯನ್ನು ನೀವು ಒಪ್ಪಿಕೊಳ್ಳುತ್ತೀರಾ?" ಎಂದು ಕೇಳಿದರು.
ಪ್ರಧಾನಿ ಮೋದಿ ಅವರು ಇಂದು ಬಿಸ್ವಾನಾಥ್ ಮತ್ತು ಚಾರೈಡಿಯೊದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಹಾಗೂ ಹೆದ್ದಾರಿ ಮತ್ತು ರಸ್ತೆಗಳ ಯೋಜನೆಯಾದ ಅಸೋಮ್ ಮಾಲಾ ಅನ್ನು ಪ್ರಾರಂಭಿಸಿದರು.
"ಏಳು ದಶಕಗಳಿಂದ ಸ್ವಾತಂತ್ರ್ಯ ಬಂದಾಗಿನಿಂದ ಅಸ್ಸಾಂನಲ್ಲಿ ಆರು ವೈದ್ಯಕೀಯ ಕಾಲೇಜುಗಳಿವೆ. ಆದರೆ ಕಳೆದ ಐದು ವರ್ಷಗಳಲ್ಲಿ ಇನ್ನೂ ಕೂಡಾ ಆರು ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಹಾಗಾಗಿ, ಪ್ರತಿವರ್ಷ ಅಸ್ಸಾಂಗೆ 1,600 ಎಂಬಿಬಿಎಸ್ ವೈದ್ಯರು ಸಿಗುತ್ತಾರೆ" ಎಂದರು.