ಬೆಂಗಳೂರು, ಫೆ.07 (DaijiworldNews/PY): "ಕುರುಬರ ಬೆಂಬಲದಿಂದ ಸಿಎಂ ಆದವರು ಎಸ್.ಟಿ ಹೋರಾಟದ ಸಮಾವೇಶಕ್ಕೆ ಗೈರಾಗಿರುವುದು ಸರಿಯಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, "ಈ ಸಮಾವೇಶವು ಕುರುಬರ ಸಮುದಾಯದ ಪರವಾಗಿ ನಡೆಯುತ್ತಿರುವ ಹೋರಾಟವಾಗಿದೆ. ಹಾಗಾಗಿ ಇಲ್ಲಿ ರಾಜಕಿಯವಾದ ಕಾರ್ಯಸೂಚಿ ಇಲ್ಲ. ಕುರುಬರ ಬೆಂಬಲದಿಂದ ಸಿಎಂ ಆದವರು ಕಣ್ಣು ತೆರೆದು ನೋಡಬೇಕು" ಎಂದು ಹೇಳಿದ್ಧಾರೆ.
"ಕುರುಬರಿಗಾಗಿ ನ್ಯಾಯ ಕೇಳುವ ಸಲುವಾಗಿ ಸಮುದಾಯದ ಸ್ವಾಮೀಜಿಗಳು 340 ಕಿಲೋಮೀಟರ್ ನಡೆದು ಬಂದಿದ್ದಾರೆ. ಸಮುದಾಯದ ಬೆಂಬಲ ಪಡೆದುಕೊಂಡು ಸಿಎಂ ಆದ ವ್ಯಕ್ತಿ ಸ್ವಾಮೀಜಿಗಳನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಣೆ ಮಾಡಬೇಕಿತ್ತು. ಆದರೆ, ಆ ವ್ಯಕ್ತಿ ಆ ರೀತಿಯಾದ ಕಾರ್ಯವನ್ನು ಮಾಡಿಲ್ಲ. ಸಮಾವೇಶಕ್ಕೆ ಗೈರಾಗಿದ್ದಾರೆ" ಎಂದಿದ್ದಾರೆ.