ಚೆನ್ನೈ, ಫೆ.07 (DaijiworldNews/PY): "ಫೆ.8ರಂದು ಬೆಂಗಳೂರಿನಿಂದ ತಮಿಳುನಾಡಿಗೆ ವಿ.ಕೆ.ಶಶಿಕಲಾ ಆಗಮಿಸುವ ದಿನ ಅವರ ಗುಂಪು ಹಿಂಸಾಚಾರ ನಡೆಸಲು ಪಿತೂರಿ ನಡೆಸಿದೆ" ಎಂದು ಎಐಎಡಿಎಂಕೆ ಆರೋಪಿಸಿದೆ.
ಈ ವಿಚಾರದ ಬಗ್ಗೆ ದೂರು ನೀಡಲಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಕೋರಲಾಗಿದೆ.
ಆದರೆ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಮುಖ್ಯಸ್ಥ ಮತ್ತು ಶಶಿಕಲಾ ಅವರ ಸಂಬಂಧಿ ಟಿ.ಟಿ.ವಿ ದಿನಕರನ್ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, "ಎಐಎಡಿಎಂಕೆಯ ಕೆಲ ಮುಖಂಡರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ" ಎಂದಿದ್ದಾರೆ.
ಬೆಂಗಳೂರಿನಿಂದ ಶಶಿಕಲಾ ತಮಿಳುನಾಡಿಗೆ ಮರಳು ಹಿನ್ನೆಲೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ. ಪನ್ನೀರಸೇಲ್ವಂ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಎಐಎಡಿಎಂಕೆ ಮುಖಂಡರು, ಮುಂದಿನ ಕಾರ್ಯತಂತ್ರಗಳ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.
"ಎಐಎಡಿಎಂಕೆಯಿಂದ ಯಾರಾದರೂ ಶಶಿಕಲಾ ಅವರನ್ನು ಭೇಟಿಯಾದರೆ ಅವರನ್ನು ಪಕ್ಷದಿಂದ ವಜಾಗೊಳಿಸಲಾಗುವುದು" ಎಂದು ವಕ್ತಾರ ವೈಗೈಚೆಲ್ವನ್ ತಿಳಿಸಿದ್ದಾರೆ.