ನವದೆಹಲಿ, ಫೆ.07 (DaijiworldNews/PY): "ಪ್ರಧಾನಿ ಮೋದಿ ಸರ್ಕಾರ ದುರಂಹಕಾರವನ್ನು ಬಿಟ್ಟು, ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಗಾಂಧಿ ಜಯಂತಿವರೆಗೆ ರೈತರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅರ್ಕಾರದ ಮೇಲೆ ಅವರಿಗೆ ಎಷ್ಟು ಭರವಸೆ ಇದೆ ಎನ್ನುವುದು ಸಹ ಸ್ಪಷ್ಟವಾಗಿದೆ" ಎಂದಿದ್ದಾರೆ.
"ಮೋದಿ ಸರ್ಕಾರ ದುರಂಹಕಾರವನ್ನು ಬಿಟ್ಟು, ಪ್ರತಿಭಟನಾನಿರತ ರೈತರ ಬೇಡಿಗೆಗಳನ್ನು ಪರಿಗಣಿಸಿ ಹಾಗೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಗಾಂಧಿ ಜಯಂತಿವರೆಗೆ ಪ್ರತಿಭಟನೆ ಮುಂದುವರೆಸಲು ರೈತರು ದೃಢನಿಶ್ಚಯಿಸಿದ್ದಾರೆ. ಇದು ಮೋದಿ ಸರ್ಕಾರದ ಮೇಲೆ ಎಷ್ಟು ಭರವಸೆ ಇದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳು ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಕೂಡಾ ಈವರೆಗೆ ಬಿಕ್ಕಟ್ಟು ನಿವಾರಣೆಗೊಂಡಿಲ್ಲ.