ಕೊಚ್ಚಿ, ಫೆ.07 (DaijiworldNews/PY): "ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾಧಿಸಿದಲ್ಲಿ, ಶಬರಿಮಲೆಯಲ್ಲಿ ಮಹಿಳಾ ಪ್ರವೇಶಕ್ಕೆ ಸಂಬಂಧಿಸಿದಂತೆ ಭಕ್ತರ ನಂಬಿಕೆಗೆ ಧಕ್ಕೆಯುಂಟಾಗದಂತೆ ನಿಯಮಗಳನ್ನು ರೂಪಿಸಲಾಗುತ್ತದೆ" ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, "ಮುಂಬರುವ ಚುನಾವಣೆಯಲ್ಲಿ ಯುಡಿಎಫ್ ಪ್ರಣಾಳಿಕೆಯಲ್ಲಿ ಶಬರಿಮಲೆಯ ವಿಚಾರ ಪ್ರಮುಖ ವಿಷಯವಾಗಲಿದೆ" ಎಂದಿದ್ದಾರೆ.
"ಯುಡಿಎಫ್ ಅಧಿಕಾರಕ್ಕೆ ಬಂದರೆ, ಶಬರಿಮಲೆಗೆ ಸಂಬಂಧಿಸಿದಂತೆ ನಿಯಮಗಳನ್ನು ಜಾರಿ ಮಾಡಲಾಗುವುದು. ನಮ್ಮ ನಿಲುವು ಭಕ್ತರ ಆಚರಣೆಗಳಿಗೆ ಧಕ್ಕೆಯಾಗದಂತೆ ಮುಂದುವರೆಯುವುದು" ಎಂದು ತಿಳಿಸಿದ್ದಾರೆ.
"ಈ ವಿಷಯದ ಬಗ್ಗೆ ಕಾನೂನು ರೂಪಿಸಲು ಸರ್ಕಾರ ಏಕೆ ಸಿದ್ದವಿಲ್ಲ?" ಎಂದು ಸಿಎಂ ಪಿಣರಾಯಿ ವಿಜಯನ್ ಅವರನ್ನು ಪ್ರಶ್ನಿಸಿದ್ದಾರೆ.
"ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ವಿರೋಧ ಪಕ್ಷದ ನಾಯಕ ಚೆನ್ನಿತ್ತಲ ಅವರು ಹಮ್ಮಿಕೊಂಡಿರುವ ಐಶ್ವರ್ಯ ಕೇರಳ ಯಾತ್ರೆಯ ಮುಕ್ತಾಯದ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
"ತಿರುವನಂತಪುರದಲ್ಲಿ ನಡೆಯಲಿರುವ ಮುಕ್ತಾಯ ಅಧಿವೇಶನದಲ್ಲಿ ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ" ಎಂದಿದ್ದಾರೆ.