ಬೆಂಗಳೂರು, ಫೆ.07 (DaijiworldNews/PY): "ವಿಶ್ವದ ಆರೋಗ್ಯ ಕ್ಷೇತ್ರ ಕೊರೊನಾದಿಂದ ತಲ್ಲಣಗೊಂಡಿದ್ದು, ಕೊರೊನೊತ್ತರದ ವೇಳೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸುಧಾರಣೆಯೊಂದಿಗೆ ಬಲಪಡಿಸುವ ಅವಶ್ಯಕತೆ ಇದೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, "ದೇಶದ ವೈದ್ಯರು ಸೇರಿದಂತೆ ಅರೆವೈದ್ಯಕೀಯ ಸಿಬ್ಬಂದಿ ವರ್ಗವು ಕೊರೊನಾ ಸಾಂಕ್ರಾಮಿಕವನ್ನು ಸವಾಲಾಗ ಸ್ವೀಕರಿಸಿದ್ದು, ದೇಶದ ಜನತೆಯ ಪ್ರಾಣವನ್ನುಉಳಿಸಿದ್ದಾರೆ. ಭವಿಷ್ಯದಲ್ಲಿ ಈ ರೀತಿಯಾದ ಸಾಂಕ್ರಾಮಿಕಗಳನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆ ಇದೆ" ಎಂದರು.
"ಎಲ್ಲಾ ಕ್ಷೇತ್ರದಲ್ಲೂ ಕೂಡಾ ಮಹಿಳೆಯರು ಉತ್ತಮವಾದ ಸಾಧನೆಗೈದಿದ್ದಾರೆ. ಭವಿಷ್ಯದಲ್ಲೂ ಕೂಡಾ ಮಹಿಳೆಯರು ಎಲ್ಲಾ ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ. ಕೊರೊನಾ ನಿಯಂತ್ರಣದ ವೇಳೆ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ವ್ಯಾಕ್ಸಿನ್ ಸಂಶೋಧನೆಯೊಂದಿಗೆ ವಿದೇಶಗಳಿಗೂ ಕೂಡಾ ಲಸಿಕೆಗಳನ್ನು ನೀಡುತ್ತಿದ್ದೇವೆ. ಜ್ಞಾನಾಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ" ಎಂದು ಹೇಳಿದರು.