ಗುವಾಹಟಿ, ಫೆ.07 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂಗೆ ಭೇಟಿ ನೀಡಲಿದ್ದು, ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರು 11.45ಕ್ಕೆ ಅಸ್ಸಾಂನ ಸೋಂತಿಪುರ ಜಿಲ್ಲೆಗೆ ಭೇಟಿ ನೀಡಲಿದ್ದು, ರಾಜ್ಯ ಹೆದ್ದಾರಿಗಳನ್ನು ಸುಧಾರಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ‘ಅಸೋಮ್ ಮಾಲಾ’ ಉದ್ಘಾಟಿಸಲಿದ್ದಾರೆ.
ಬಳಿಕ ಅವರು ಬಿಸ್ವನಾಥ್ ಹಾಗೂ ಚರೈದೆಯೊ ಜಿಲ್ಲೆಗಳಲ್ಲಿ ಎರಡು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 1,100 ಕೋಟಿ ವೆಚ್ಚದಲ್ಲಿ ಈ ಎರಡೂ ಕಾಲೇಜುಗಳ ನಿರ್ಮಾಣವಾಗಲಿವೆ. ಎರಡೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು 500 ಹಾಸಿಗೆ ಸಾಮರ್ಥ್ಯವಾಗಿರಲಿದ್ದು, 100 ಎಂಬಿಬಿಎಸ್ ಸೀಟುಗಳನ್ನು ಹೊಂದಿರಲಿವೆ.
ಪ್ರಧಾನಿ ಮೋದಿ ಅವರು ಸಂಜೆ 4.50ಕ್ಕೆ ಪಶ್ಚಿಮ ಬಂಗಾಳದ ಹಾಲ್ದಿಯಾ ತಲುಪಲಿದ್ದು, ಅಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 1,100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ನಿರ್ಮಿಸಿರುವ ಎಲ್ಪಿಜಿ ಇಂಪೋರ್ಟ್ ಟರ್ಮಿನಲ್ ಅನ್ನು ಪ್ರಧಾನಿ ಮೋದಿ ಅವರು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.
ಇದಾದ ಬಳಿಕ ಮೋದಿ ಅವರು ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.