ಮುಂಬೈ, ಫೆ.07 (DaijiworldNews/MB) : ರೈತರ ಪ್ರತಿಭಟನೆಗೆ ಸಂಬಂಧಿಸಿ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ಗೆ ರಾಜಕೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ರೈತರ ಪ್ರತಿಭಟನೆ ಕುರಿತಂತೆ ಅಮೆರಿಕಾದ ಪಾಪ್ ತಾರೆ ರಿಹಾನ್ನಾ ಟ್ವೀಟ್ಗೆ ಪ್ರತಿಕ್ರಿಯಿಸಿದ್ದ ಸಚಿನ್ ತೆಂಡೂಲ್ಕರ್ ಅವರು, "ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ದೇಶದ ಆಂತರಿಕ ವಿಚಾರದಲ್ಲಿ ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವಂತಿಲ್ಲ. ಭಾರತೀಯರಿಗೆ ಭಾರತ ಏನು ಎಂಬುದು ತಿಳಿದಿದೆ ಮತ್ತು ಭಾರತಕ್ಕಾಗಿ ಭಾರತವೇ ನಿರ್ಧರಿಸಬೇಕು. ರಾಷ್ಟ್ರವಾಗಿ ಐಕ್ಯವಾಗಿ ಉಳಿಯೋಣ" ಎಂದಿದ್ದರು. ಇದು ಪರೋಕ್ಷವಾಗಿ ಕೇಂದ್ರ ಸರ್ಕಾರಕ್ಕೆ ಸಚಿನ್ ಅವರು ಬೆಂಬಲ ಸೂಚಿಸಿದ್ದಂತಾಗಿತ್ತು. ಈ ಟ್ವೀಟ್ಗೆ ಹಲವು ಸೆಲೆಬ್ರೆಟಿಗಳು ಕೈಜೋಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, 'ಭಾರತೀಯ ಸೆಲೆಬ್ರಿಟಿಗಳು ತೆಗೆದುಕೊಂಡ ನಿಲುವಿನ ಬಗ್ಗೆ ಅನೇಕ ಜನರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ನಾನು ಸಚಿನ್ ತೆಂಡೂಲ್ಕರ್ಗೆ ಸಲಹೆ ನೀಡುತ್ತೇನೆ'' ಎಂದು ಹೇಳಿದ್ದಾರೆ.