ನವದೆಹಲಿ,ಫೆ.06 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ನಡೆಯುತ್ತಿರುವ ಪ್ರತಿಭಟನೆ ಹಿಂದೆ ಅಂತರಾಷ್ಟ್ರೀಯ ಪಿತೂರಿ ಇದೆ ಎಂಬ ಆರೋಪವನ್ನು ರೈತ ನಾಯಕ ರಾಕೇಶ್ ಟಿಕಾಯತ್ ಸಂಪೂರ್ಣವಾಗಿ ಅಲ್ಲಗಳೆದಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ರಾಕೇಶ್ ಟಿಕಾಯತ್, "ಯಾವ ಅಂತರರಾಷ್ಟ್ರೀಯ ಪಿತೂರಿ? ಯಾವ ಮಾನಹಾನಿ? ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಕೇಳುತ್ತಿದ್ದಾರೆ. ಇದು ಭಾರತಕ್ಕೆ ಕೆಟ್ಟ ಹೆಸರು ತಂದಂತೆ ಆಗುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಬೆಂಬಲ ಬೆಲೆ ಕಾಯ್ದೆ ಇದ್ದರೆ ಮಾತ್ರ ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತದೆ. ಬೆಂಬಲ ಬೆಲೆ ಪ್ರಕ್ರಿಯೆ ಇಲ್ಲದಿರುವುದೇ ಒಂದು ದೊಡ್ಡ ಪಿತೂರಿ" ಎಂದರು.
ಇನ್ನು "ಕಾನೂನುಗಳನ್ನು ಹಿಂಪಡೆಯುವಲ್ಲಿ ಏನು ಸಮಸ್ಯೆ ಇದೆ? ರೈತರ ಒಪ್ಪಿಗೆ ಇಲ್ಲದೇ ಕಾಯ್ದೆಗಳನ್ನು ತಂದಿದ್ದಾರೆ. ಅಂತಹ ಕಾಯ್ದೆಗಳು ಇರಬೇಕೆಂದು ರೈತರು ಬಯಸುವುದಿಲ್ಲ. ನಾವು ಕೇವಲ ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಬೇರೆ ಏನಾದರೂ ಮಾಡುತ್ತಿದ್ದೇವೆಯೇ ಎಂದು ಪ್ರಶ್ನಿಸಿರುವ ಅವರು ನಮಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ರೈತರು ಯಾರಿಗೆ ಮತ ಹಾಕಬೇಕೆಂದು ನಾವು ಎಂದಿಗೂ ಹೇಳುವುದಿಲ್ಲ" ಎಂದು ಹೇಳಿದ್ದಾರೆ.