ಬೆಂಗಳೂರು, ಫೆ.06 (DaijiworldNews/PY): "ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿರುವ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು" ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವಹಿಸಿರುವ ಸರ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ" ಎಂದಿದ್ದಾರೆ.
"ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸುವವರು ಇಲ್ಲದಂತಾಗಿದೆ. ಇದಕ್ಕೆ ಜನವರಿ 16 ರಂದು ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ಆದೇಶವೇ ಸಾಕ್ಷಿ" ಎಂದು ಹೇಳಿದ್ದಾರೆ.
"ಸಮಾಜ ಕಲ್ಯಾಣ ಇಲಾಖೆ ಹೊರಡಿಸಿರುವ ನೂತನ ಆದೇಶದಲ್ಲಿ ಕೆಲವು ನಿರ್ದಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಜಾಗೃತ ಕೋಶ)ದಿಂದ ವರದಿ ಪಡೆದು ಜಾತಿ ಸಿಂಧುತ್ವ ಪ್ರಮಾಣ ಪತ್ರಗಳನ್ನು ನೀಡತಕ್ಕದ್ದು ಎಂದು ತಿಳಿಸಲಾಗಿದೆ" ಎಂದಿದ್ದಾರೆ.
"ಪರಿಶಿಷ್ಟ ವರ್ಗದ 21 ಜಾತಿಗಳನ್ನು, ಪರಿಶಿಷ್ಟ ಜಾತಿಯ 8 ಜಾತಿಗಳನ್ನು ಗುರಿಯಾಗಿಸಿಕೊಂಡು ಸರ್ಕಾರ ಆದೇಶ ಹೊರಡಿಸಿದೆ. ತನ್ನ ಈ ಆದೇಶಕ್ಕೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿದೆ. ಆದರೆ ಸರ್ವೋಚ್ಛ ನ್ಯಾಯಾಲಯ ತನ್ನ ಆದೇಶದಲ್ಲಿ ಈ 29 ಜಾತಿಗಳನ್ನು ಮಾತ್ರ ಗುರಿಯಾಗಿಸಿಕೊಂಡು ಜಾಗೃತ ಕೋಶದವರು ಪರಿಶೀಲನೆ ಮಾಡಬೇಕೆಂದು ಹೇಳಿಲ್ಲ" ಎಂದು ತಿಳಿಸಿದ್ದಾರೆ.
"ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಹಲವು ವರ್ಷಗಳಿಂದ ವಿಚಾರಣೆಯಾಗದೆ ಬಾಕಿಯಿರುವ ಪ್ರಕರಣಗಳ ಸಂಖ್ಯೆಯೇ ಸಾಕಷ್ಟಿದೆ. ಅವುಗಳನ್ನೇ ಇನ್ನೂ ಇತ್ಯರ್ಥಪಡಿಸದೆ ಅರ್ಜಿಗಳನ್ನು ಕಚೇರಿಯಲ್ಲಿ ಕೊಳೆ ಹಾಕಿಕೊಂಡು, ಅಲ್ಲಿನ ಅಧಿಕಾರಿಗಳು ಜನರನ್ನು ಅಯ್ಯೊ ಎನ್ನಿಸುತ್ತಿದ್ದಾರೆ" ಎಂದಿದ್ದಾರೆ.
"ಇಂತಹ ಇಲಾಖೆಯು ಸರ್ಕಾರಿ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಜಾತಿಯ ಕುರಿತಾದ ವಿವರಗಳನ್ನು ನಿರ್ಧಿಷ್ಟ ಅವಧಿಯಲ್ಲಿ ತನಿಖೆ ಮಾಡಿ ಸಲ್ಲಿಸಲು ಸಾಧ್ಯವಿದೆಯೆ? ಇದು ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಸಮುದಾಯಗಳ ಅಭ್ಯರ್ಥಿಗಳಿಗೆ ಕಿರುಕುಳ ನೀಡಲು ಹಾಗೂ ಇನ್ನಷ್ಟು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲು ನೆರವಾದಂತಾಗಲಿದೆ" ಎಂದು ಹೇಳಿದ್ದಾರೆ.