ಅಹಮದಾಬಾದ್, ಫೆ.06 (DaijiworldNews/PY): "ಜನರ ಹಕ್ಕುಗಳನ್ನು ಕಾಪಾಡುವಲ್ಲಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಾದ ಸಂದರ್ಭಗಳಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆ ತನ್ನ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
60 ವರ್ಷಗಳನ್ನು ಪೂರ್ಣಗೊಳಿಸಿರುವ ಗುಜರಾತ್ ಹೈಕೋರ್ಟ್ನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಬಳಿಕ ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ದೇಶದ ನ್ಯಾಯಾಂಗ ವ್ಯವಸ್ಥೆಯು, ಜನರ ಹಕ್ಕುಗಳನ್ನು ಕಾಪಾಡುವಲ್ಲಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕಾದ ಸಂದರ್ಭಗಳಲ್ಲಿ ತನ್ನ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಸಮಯದಲ್ಲಿ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ವಿಚಾರಣೆ ನಡೆಸಿದೆ" ಎಂದಿದ್ದಾರೆ.
"ನಮ್ಮ ನ್ಯಾಯಾಂಗ ವ್ಯವಸ್ಥೆಯು ನಮ್ಮ ಸಂವಿಧಾನವನ್ನು ಎತ್ತಿಹಿಡಿಯಲು ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸಿದೆ ಎನ್ನುವ ವಿಚಾರವನ್ನು ಪ್ರತಿಯೊಬ್ಬ ದೇಶವಾಸಿಯೂ ಹೇಳಬಹುದು. ನಮ್ಮ ನ್ಯಾಯಾಂಗವು ಅದ ಸಕಾರಾತ್ಮಕ ವ್ಯಾಖ್ಯಾನದಿಂದ ಸಂವಿಧಾನವನ್ನು ಬಲಪಡಿಸಿದೆ" ಎಂದು ಹೇಳಿದ್ದಾರೆ.