ಕೋಲ್ಕತ್ತ, ಫೆ.06 (DaijiworldNews/HR): ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದಾದ್ಯಂತ ರಥ ಯಾತ್ರೆ ನಡೆಸಲು ಮುಂದಾಗಿದ್ದು, ಯಾತ್ರೆಗೆ ಇಂದು ಚಾಲನೆ ನೀಡಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.
ಜೆಪಿ ನಡ್ಡಾ ಭೇಟಿ ನೀಡಲಿರುವ ನದಿಯಾ ಜಿಲ್ಲೆಯಾದ್ಯಂತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಮಧ್ಯಾಹ್ನದಿಂದ ಎರಡು ದಿನಗಳ ಕಾಲ ಬೈಕ್ ರ್ಯಾಲಿ ನಡೆಸಲು ನಿರ್ಧರಿಸಿದೆ.
ಇನ್ನು ಇಂದು ಛಪ್ರಾದಲ್ಲಿ ಆರಂಭವಾಗಲಿರುವ ಟಿಎಂಸಿಯ 'ಜನಸಮರ್ಥನ ಯಾತ್ರೆ' ಅಭಿಯಾನವು ಎರಡು ದಿನಗಳ ಬಳಿಕ ಪಲಾಶಿಯಲ್ಲಿ ಮುಕ್ತಾಯವಾಗಲಿವೆ ಎನ್ನಲಾಗಿದೆ.
ಬಿಜೆಪಿಯ ರಥ ಯಾತ್ರೆಗೆ ಪೊಲೀಸರು ಅನುಮತಿ ನೀಡದಿದ್ದರೂ, ಟಿಎಂಸಿ ತನ್ನ ಬೈಕ್ ರ್ಯಾಲಿ ಮುಂದುವರಿಸಲು ನಿರ್ಧರಿಸಿದ್ದು, ಪೊಲೀಸರು ಅನುಮತಿ ನೀಡದಿರುವುದನ್ನು ಲೆಕ್ಕಿಸಿದೆ ತಾವು ಅಭಿಯಾನ ನಡೆಸುವುದಾಗಿ ಬಿಜೆಪಿ ಹೇಳಿತ್ತು.
ಶನಿವಾರ ಸಂಜೆ 4 ಗಂಟೆಗೆ 'ಪರಿವರ್ತನಾ ಯಾತ್ರೆ'ಗೆ ಚಾಲನೆ ನೀಡಲು ನಡ್ಡಾ ಅವರು ನಬಾದ್ವೀಪ್ಗೆ ಭೇಟಿ ನೀಡಲಿದ್ದು, ಬಳಿಕ ಕೃಷ್ಣನಗರದ ಧುಬುಲಿಯಾಗೆ ತೆರಳಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.