ಬೆಂಗಳೂರು, ಫೆ.06 (DaijiworldNews/PY): ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದಿರುವ ಪ್ರಕರಣ ಆರೋಪಿಯಾಗಿರುವ ವಕೀಲೆ ಮೀರಾ ರಾಘವೇಂದ್ರ ಅವರಿಗೆ ವಿಚಾರಣೆ ಹಾಜರಾಗುವಂತೆ ಹಲಸೂರು ಗೇಟ್ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ.
"ನೋಟಿಸ್ ತಲುಪಿದ ಮೂರು ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು. ವಿಚಾರಣೆಗೆ ಹಾಜರಾಗದಿದ್ದಲ್ಲಿ, ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ನೋಟಿಸ್ನಲ್ಲಿ ಮೀರಾ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಪ್ರೊ.ಭಗವಾನ್ ಅವರು ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಕೋರ್ಟ್ಗೆ ಆಗಮಿಸಿದ್ದು, ಈ ವೇಳೆ ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಮುಖಕ್ಕೆ ಮಸಿ ಬಳಿದು "ಯಾವಾಗಲು ದೇವರ ಬಗ್ಗೆ ರಾಮನ ಬಗ್ಗೆ ಮಾತನಾಡುತ್ತೀರಾ?. ನಾಚಿಕೆ ಆಗಲ್ವಾ ನಿಮಗೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಈ ವೇಳೆ ಭಗವಾನ್ ಅವರು ಮೀರಾನನ್ನು ಬಂಧಿಸುವಂತೆ ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸುವ ಮೀರಾ ನಾನು "ಎಲ್ಲದಕ್ಕೂ ರೆಡಿ, ಜೈಲಿಗೆ ಹೋಗಲೂ ಸಿದ್ಧ" ಎಂದು ಹೇಳಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು.