ನವದೆಹಲಿ, ಫೆ.06 (DaijiworldNews/PY): ಕೃಷಿ ಕಾಯ್ದೆಯ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿಗಳಲ್ಲಿ ಮೊಳೆ ಹಾಕಿದ್ದ ಪೊಲೀಸರಿಗೆ ಅದೇ ಸ್ಥಳದಲ್ಲಿ ರೈತರು ಹೂವಿನ ಗಿಡ ನೆಟ್ಟು ತಿರುಗೇಟು ನೀಡಿದ್ದಾರೆ.
ಇದೀಗ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ವರ್ತನೆಯ ವಿರುದ್ದ ಟೀಕೆಗಳು ಕೂಡಾ ವ್ಯಕ್ತವಾಗಿವೆ.
ಗಾಜಿಪುರ ಗಡಿಯಲ್ಲಿ ಮೊಳೆಗಳನ್ನು ಹಾಕಿ, ಸಿಮೆಂಟ್ ಸುರಿದು ಬ್ಯಾರಿಕೇಡ್ಗಳನ್ನು ಇಟ್ಟಿರುವ ಹಿನ್ನೆಲೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ಹೆದ್ದಾರಿಯಲ್ಲಿ ಹಾಕಿದ್ದ ಮೊಳೆಗಳನ್ನು ತೆಗೆಯುತ್ತಿರುವ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸರು ವಿಡಿಯೋಗೆ ಸ್ಪಷ್ಟನೆ ನೀಡಿದ್ದು, "ರಸ್ತೆಯ ಮೇಲ್ಭಾಗದಲ್ಲಿ ಹಾಕಲಾದ ಮೊಳೆಯನ್ನು ಕಿತ್ತು ಹಾಕಬಹುದು. ಆ ಕಾರಣದಿಂದ ತಗ್ಗು ಮಾಡಿ ಇನ್ನಷ್ಟು ಆಳಕ್ಕೆ ಮೊಳೆ ಹಾಕಲಾಗುತ್ತಿದೆ" ಎಂದು ತಿಳಿಸಿದ್ದರು.
ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಹೊರತುಪಡಿಸಿ ದೇಶವ್ಯಾಪಿ ರೈತರು ಫೆ.6ರಂದು ಚಕ್ಕಾ ಜಾಮ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಸೇರಿದಂತೆ ದೇಶದ ಹಲವು ಕಡೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಚಕ್ಕಾ ಜಾಮ್ ಪ್ರತಿಭಟನೆ ನಡೆಯಲಿದೆ.