ನವದೆಹಲಿ, ಫೆ.06 (DaijiworldNews/PY): ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ದ ದೆಹಲಿ ಹೊರತುಪಡಿಸಿ ದೇಶವ್ಯಾಪಿ ರೈತರು ಚಕ್ಕಾ ಜಾಮ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಸೇರಿದಂತೆ ದೇಶದ ಹಲವು ಕಡೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಚಕ್ಕಾ ಜಾಮ್ ಪ್ರತಿಭಟನೆ ನಡೆಯಲಿದೆ.
ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ತುರ್ತು ಸೇವೆಗಳನ್ನು ತಡೆಯುವುದಿಲ್ಲ ಎಂದು ತಿಳಿಸಿದೆ. ಆದರೂ ಕೂಡಾ ಪ್ರತಿಭಟನೆ ಹಿನ್ನೆಲೆ ದೆಹಲಿ ಗಡಿಗಳಲ್ಲಿ ಕಟ್ಟೆಚ್ಚರವಹಿಸಲಾಗಿದೆ.
ಗರಿಷ್ಠ ಸಂಯಮ ಇಟ್ಟುಕೊಂಡು ಪ್ರತಿಭಟನೆ ಕೈಗೊಳ್ಳಲು ರೈತರಿಗೆ ಹಾಗೂ ಅಧಿಕಾರಿಗಳಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಸಲಹೆ ನೀಡಿದೆ. "ಆಫ್ಲೈನ್ ಹಾಗೂ ಆನ್ಲೈನ್ನಲ್ಲಿ ಶಾಂತಿಯುತ ಹೋರಾಟದ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಕಾಪಾಡಬೇಕು. ಪ್ರತಿಯೊಬ್ಬರಿಗೂ ಕೂಡಾ ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಸಮನಾದ ಪರಿಹಾರಗಳನ್ನು ಕಂಡುಹಿಡಿಯುವುದು ಪ್ರಮುಖವಾಗಿದೆ" ಎಂದಿದೆ.
ಚಕ್ಕಾ ಜಾಮ್ ಪ್ರತಿಭಟನೆಯ ಹಿನ್ನೆಲೆ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದೆಹಲಿ ಪೊಲೀಸರಿಗೆ ಸರ್ಕಾರ ನಿರ್ದೇಶನ ನೀಡಿದೆ. "ಯಾವುದೇ ಕಾರಣಕ್ಕೂ ಕೂಡಾ ಜ.26ರ ಗಣರಾಜ್ಯೋತ್ಸವ ದಿನದಂದು ನಡೆದ ರೀತಿ ಹಿಂಸಾಚಾರ ಮತ್ತೆ ನಡೆಯಬಾರದು. ದೆಹಲಿಯ ಒಳಗೆ ಕನಿಷ್ಠ ಪೊಲೀಸರನ್ನು ಬಳಸಿ, ಗಡಿಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ. ಯಾರೇ ಆದರೂ ಕಾನೂನನ್ನು ಮೀರಿ ವರ್ತಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸೂಚಿಸಲಾಗಿದೆ.