ಶಿವಮೊಗ್ಗ, ಫೆ.06 (DaijiworldNews/PY): ಶಿವಮೊಗ್ಗದ ಹುಣಸೋಡು ಸ್ಪೋಟಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಜಮೀನಿನ ಮಾಲೀಕರಾದ ಶಂಕರಗೌಡ ಟಿ.ಕುಲಕರ್ಣಿ, ಅನಿನಾಶ್ ಕುಲಕರ್ಣಿ ಹಾಗೂ ಆಂಧ್ರಪ್ರದೇಶದ ಅನಂತಪುರಂ ನಿವಾಸಿಗಳಾದ ಪಿ.ಮಂಜುನಾಥ್ ಸಾಯಿ ಹಾಗೂ ಪಿ.ಶ್ರೀರಾಮಲು ಅವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು, "ಪಿ.ಶ್ರೀರಾಮುಲು ಅವರಿಗೆ ಸಂಬಂಧಿಸಿದ ಸ್ಪೋಟಕಗಳ ಗೋದಾಮು ರಾಯದುರ್ಗದಲ್ಲಿದೆ. ಅಲ್ಲಿ ಪರವಾನಗಿ ಪಡೆಯದೇ ಸ್ಪೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಅಕ್ರಮ ಸ್ಫೋಟಕ ದಾಸ್ತಾನು ಸಂಬಂಧಪಟ್ಟಂತೆ ಅನಂತಪುರಂ ಜಿಲ್ಲೆಯ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ" ಎಂದು ಹೇಳಿದ್ದಾರೆ.
"ಪಿ.ಶ್ರೀರಾಮುಲು ಅವರ ಮಾಲೀಕತ್ವದಲ್ಲಿರುವ ಆಂಧ್ರಪ್ರದೇಶದ ಅನಂತಪುರಂನ ಗಣೇಶ್ ಟ್ರೇಡರ್ಸ್ನಿಂದ ಹುಣಸೋಡು ಘಟನೆಗೆ ಸಂಬಂಧಿಸಿದ ಸ್ಫೋಟಕಗಳು ಪೂರೈಕೆಯಾಗಿರುವ ವಿಚಾರ ತನಿಖೆಯ ಸಂದರ್ಭ ತಿಳಿದುಬಂದಿದೆ. ಪ್ರಕರಣದಲ್ಲಿ ಈವರೆಗೆ ಎಂಟು ಮಂದಿಯನ್ನು ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
"ಭದ್ರಾವತಿ ಟೌನ್ ಸಿಪಿಐ ರಾಘವೇಂದ್ರ ಕಾಂಡಿಕೆ, ವಿನೋಬನಗರ ಎಸ್ಐ ಉಮೇಶ್, ಸಿಬ್ಬಂದಿ ನಾಗರಾಜ್, ಸಂದೀಪ್ ಅವರನ್ನು ಒಳಗೊಂಡ ತಂಡವು ಫೆ.4ರಂದು ಜಮೀನಿನ ಮಾಲೀಕರಾದ ಶಂಕರ್ಗೌಡ ಮತ್ತು ಅವಿನಾಶ್ ಅವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಗೆ ಒಳಪಡಿಸಿದೆ" ಎಂದಿದ್ದಾರೆ.