ನವದೆಹಲಿ, ಫೆ.06 (DaijiworldNews/PY): ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ದ ಫೆಬ್ರವರಿ 6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ ಹಮ್ಮಿಕೊಂಡಿರುವ ಚಕ್ಕಾ ಜಾಮ್ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದು, "ದೇಶವ್ಯಾಪಿ ಮೂರು ಗಂಟೆಗಳ ಕಾಲ ರೈತರು ಕರೆ ನೀಡಿರುವ ಚಕ್ಕಾ ಜಾಮ್ ಪ್ರತಿಭಟನೆಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ" ಎಂದಿದ್ದಾರೆ.
"ಕೃಷಿ ಸಚಿವರು ಏನು ಹೇಳಿದರೂ ಕೂಡಾ ಅದು ಸಂಪೂರ್ಣವಾಗಿ ಸತ್ಯವನ್ನು ನಾಶ ಮಾಡುಮಾಡುತ್ತದೆ ಹಾಗೂ ತೀವ್ರ ಆಕ್ಷೇಪಾರ್ಹವಾದದ್ದು" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
"ಮೊದಲು ಕೇಂದ್ರ ಸರ್ಕಾರ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುವ ಮುಖಾಂತರ ರೈತರ ಬೇಡಿಕೆಯನ್ನು ಈಡೇರಿಸಬೇಕು" ಎಂದಿದೆ.
"ಫೆಬ್ರವರಿ 6ರಂದು ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ (ರಸ್ತೆ ದಿಗ್ಭಂಧನ) ಪ್ರತಿಭಟನೆ ನಡೆಯಲಿದೆ" ಎಂದು ಭಾರತೀಯ ಕಿಸಾನ್ ಒಕ್ಕೂಟ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದರು.
"ಮೂರು ಗಂಟೆಗಳ ಕಾಲ ರಸ್ತೆ ದಿಗ್ಭಂಧನ ಹೇರಲಾಗುವುದು. ಇದು ದೆಹಲಿಯಲ್ಲಿ ನಡೆಯುವುದಿಲ್ಲ. ಆದರೆ ದೇಶದ ಇತರೆ ಭಾಗಗಳಲ್ಲಿ ಚಕ್ಕಾ ಜಾಮ್ ಹಮ್ಮಿಕೊಳ್ಳಲಾಗುವುದು. ಚಕ್ಕಾ ಜಾಮ್ನಲ್ಲಿ ಸಿಲುಕುವ ವಾಹನಗಳಿಗೆ ನೀರು ಹಾಗೂ ಆಹಾರ ಮತ್ತು ಕಡಲೆಕಾಯಿಯಂತಹ ವಸ್ತುಗಳನ್ನು ವಿತರಿಸಲಾಗುವುದು ಜೊತೆಗೆ ಸರ್ಕಾರ ಜನರಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು" ಎಂದಿದ್ದರು.