ಬೆಂಗಳೂರು, ಫೆ.06 (DaijiworldNews/PY): ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನ ನಿರ್ಣಯದ ಪ್ರಸ್ತಾವ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರಿಸಿದ್ದು, ತಮ್ಮ ವಿರುದ್ದ ವಾಗ್ದಾಳಿ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ಈ ಸಂದರ್ಭ ಮಾತನಾಡಿದ ಯಡಿಯೂರಪ್ಪ ಎಲ್ಲಿ ತನಕ ಪ್ರಧಾನಿ ಮೋದಿ, "ಕೇಂದ್ರ ಗೃಹ ಸಚಿವರ ಬೆಂಬಲ ಹಾಗೂ ರಾಜ್ಯದ ಜನರ ಆಶೀರ್ವಾದ ನನ್ನ ಮೇಲಿರುತ್ತದೋ ಅಲ್ಲಿಯ ತನಕ ನನ್ನ ವಿರುದ್ದ 100 ಕೇಸ್ ದಾಖಲಿಸಿದರೂ ಕೂಡಾ ಎದುರಿಸುವ ಶಕ್ತಿ ನನಗಿದೆ" ಎಂದಿದ್ದಾರೆ.
"ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ. ಶಾಶ್ವತವಾಗಿ ನಿಮ್ಮನ್ನು ವಿರೋಧಪಕ್ಷದಲ್ಲಿ ಕೂರಿಸುತ್ತೇನೆ. ಕಾಂಗ್ರೆಸ್ ಪಕ್ಷದ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕೂಡಾ ಬಿಜೆಪಿಯದ್ದೇ ಮೇಲುಗೈ" ಎಂದು ಹೇಳಿದ್ದಾರೆ.
"ಆಪರೇಷನ್ ಕಮಲ ಮಾಡಿದ್ದು, ನಾನು ಎಂದು ಹೇಳುತ್ತೀರಲ್ಲ. 2006ರಲ್ಲಿ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ನೀವೂ ಕೂಡಾ ಆಪರೇಷನ್ ಮಾಡಿಲ್ಲವೇ?. ನಿಮ್ಮ ಮಾತು ಹಾಗೂ ನಡೆಯಲ್ಲಿ ಸ್ವಲ್ವವಾದರೂ ಬದಲಾವಣೆ ತಂದುಕೊಳ್ಳಿ. ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸುತ್ತಿದೆ ಎನ್ನುವ ಮಾತು ವಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ" ಎಂದಿದ್ದಾರೆ.
ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಹೆಬ್ಬಾಳ ಕ್ಷೇತ್ರದ ಉಪಚುನಾವಣೆಯನ್ನು ಬಿಟ್ಟು ಎಲ್ಲದರಲ್ಲೂ ಗೆಲುವು ಸಾಧಿಸಿದ್ದೆವು. ಅಧಿಕಾರದಲ್ಲಿದ್ದ ಸಂದರ್ಭ ಏನು ನಡೆಯುತ್ತಿದೆ ಎನ್ನುವುದು ತಿಳಿದಿದೆ. ಅದು ನ್ಯಾಯಯುತವಾಗಿ ಬಂದಿರುವ ಜನಾದೇಶವಲ್ಲ. ವಿಧಾನಸಭೆ ವಿಸರ್ಜಿ ಚುನಾವಣೆಗೆ ತೆರಳೋಣ" ಎಂದು ಹೇಳೀದ್ದಾರೆ.